ವಿಧಾನಸಭಾ ಕಲಾಪ: ವಿವಾದಾತ್ಮಕ ಹೇಳಿಕೆ ನೀಡಿದ್ದ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಳಗಾವಿ : ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಹೆಸರು ಬಳಕೆಯ ವ್ಯಸನ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಮಿತ್ ಶಾ ವಿರುದ್ಧ ಕಾಂಗ್ರೆಸ್  ಇಂದು ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿತು.

ಅಮಿತ್ ಶಾ ಹೇಳಿಕೆಯನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಕಲಾಪದ ವೇಳೆ ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ಶಾಸಕರು ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದು, ಲೋಕಸಭಾ ಕಲಾಪದ ವೇಳೆ ಮಾತನಾಡುತ್ತಿದ್ದ ಕೇಂದ್ರ ಸಚಿವ ಅಮಿತ್ ಶಾ ಕಾಂಗ್ರೆಸ್‌ನವರಿಗೆ ಎಲ್ಲದಕ್ಕೂ ಅಂಬೇಡ್ಕರ್ ಹೆಸರು ಹೇಳುವ ವ್ಯಸನವಿದೆ ಎಂಬ ಹೇಳಿಕೆ ನೀಡಿದ್ದರು.

ಇದಕ್ಕೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್‌ ಗಾಂಧಿ ಮೋದಿಯವರನ್ನು ಭೇಟಿ ಮಾಡಿ ಈ ಕುರಿತು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ನ್ಯಾಯಾಧೀಶ ಶೇಖ‌ ಕುಮಾರ್‌ ಯಾದವ್‌ ವಿವಾದಾತ್ಮಕ ಹೇಳಿಕೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತೀವ್ರ ತರಾಟೆ

ಇದೆಲ್ಲದರ ಬೆನ್ನಲ್ಲೇ ಪತ್ರಿಕಾಗೋಷ್ಠಿ ಕರೆದ ಅಮಿತ್ ಶಾ.. ನಾನು ಅಂಬೇಡ್ಕರ್ ವಿರುದ್ಧ ಮಾತನಾಡಲೇ ಇಲ್ಲ.. ನನ್ನ ಹೇಳಿಕೆಯನ್ನು ಕಾಂಗ್ರೆಸ್‌ನವರು ತಿರುಚಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಇದೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಕೂಡಾ ಅಮಿತ್ ಶಾ ಹೇಳಿಕೆ ಖಂಡಿಸಿ ಬಹಿರಂಗ ಪತ್ರ ಬರೆದು”ಸನ್ಮಾನ ಅಮಿತ್ ಶಾ ಅವರೇ, ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾಗಿ ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟದ್ದಕ್ಕಾಗಿ ಮತ್ತು ಕೊನೆಗೂ ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ.” ಎಂದು ವ್ಯಂಗ್ಯವಾಡಿದ್ದರು.

ಇದೀಗ ಬೆಳಗಾವಿ ವಿಧಾನಸಭಾ ಕಲಾಪದ ವೇಳೆಯೂ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಅಮಿತ್ ಶಾ ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಮತ್ತು ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆ ಶುರುವಾದ ಪ್ರತಿಭಟನೆಯಿಂದಾಗಿ ಕೆಲಕಾಲ ಕಲಾಪವನ್ನು ಸ್ಪೀಕ‌ರ್ ಮುಂದೂಡಬೇಕಾಯಿತು.

ಇದನ್ನೂ ನೋಡಿ : ವಿವಾದ ಹೊದ್ದು ಮಲಗಿರುವ ಕನ್ನಡ ಸಾಹಿತ್ಯ ಸಮ್ಮೇಳನ Janashakthi Media

Donate Janashakthi Media

Leave a Reply

Your email address will not be published. Required fields are marked *