ಗುವಾಹಟಿ: ಭಾನುವಾರ ಬಿಜೆಪಿ ಪಕ್ಷಕ್ಕೆ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಅವರು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಸೈಕಿಯಾ ಅವರ ಉಪಸ್ಥಿತಿಯಲ್ಲಿ ವಾಜಪೇಯಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಪೇನ್ ಬೋರಾ ಅವರು ಆಡಳಿತರೂಢ ಬಿಜೆಪಿ ಪಕ್ಷದ ಸದ್ಯಸತ್ವವನ್ನು ಸ್ವೀಕರಿಸಿದರು.
ಭೂಪೇನ್ ಬೋರಾ ಜತೆಗೆ ಕಾಂಗ್ರೆಸ್ ನಾಯಕರಾದ ಸಂಜು ಬೋರಾ, ರಾಜೇಶ್ ಕುಮಾರ್ ಜೋಷಿ, ಕಂಗನ್ ದಾಸ್, ಗಗನ್ ಚಂದ್ರ ಬೊರಾ ಸೇರಿದಂತೆ ವಿರೋಧ ಪಕ್ಷದ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು.
ಇದನ್ನೂ ಓದಿ : ಮೈಕ್ರೋಫೈನಾನ್ಸ್ ಬಲೆಗೆ ಸಿಲುಕದಂತೆ ಮಾಡುವುದು ಹೇಗೆ?
ಹಿರಿಯ ನಾಯಕ ಭೂಪೇನ್ ಬೋರಾ ಅವರು ಫೆ.16ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಅದರ ನಂತರ, ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಅವರೊಂದಿಗೆ ಮಾತುಕತೆ ನಡೆಸಿದ್ದರು. ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.
ನನಗೆ ಬಿಜೆಪಿ ಸೇರುವ ಉದ್ದೇಶವಿರಲಿಲ್ಲ. ಆದರೆ, ಕಾಂಗ್ರೆಸ್ ನಾಯಕರು ನನ್ನ ಭಾವನೆಗಳಿಗೆ ನೋವುಂಟು ಮಾಡಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ನಾನು 32 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಇತ್ತೀಚೆಗೆ ಪಕ್ಷದಲ್ಲಿ ಏನು ತಪ್ಪಾಗುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ನಾನು ರಾಜೀನಾಮೆ ನೀಡಿದ್ದೆ ಎಂದು ಭೂಪೇನ್ ಬೋರಾ ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಭೂಪೇನ್ ಬೋರಾ ರಾಜೀನಾಮೆ ನೀಡಿದ ಮರುದಿನವೇ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಫೆ.22ಕ್ಕೆಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದರು.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆ ಚುನಾವಣೆಯು ಮಾರ್ಚ್–ಏಪ್ರಿಲ್‌ನಲ್ಲಿ ನಡೆಯಲಿದೆ.
ಇದನ್ನೂ ನೋಡಿ : ಪುಸ್ತಕ ಬಿಡುಗಡೆ | ʻ ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?ʼ | ಕ್ರಿಯಾ ಮಾಧ್ಯಮ | ಎಂ.ಜಿ. ಹೆಗಡೆ
