ಕಾಂಗ್ರೆಸ್ ಪ್ರತಿಭಟನೆಯ ನಡುವೆಯೇ 4 ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು : 2022 ನೇ ಸಾಲಿನ ಕರ್ನಾಟಕ ಸಿವಿಲ್‌ ಸೇವೆಗಳ (2021 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ವಿಧೇಯಕ ಸೇರಿದಂತೆ ಒಟ್ಟು ನಾಲ್ಕು ವಿಧೇಯಕಗಳು ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರ ಪ್ರತಿಭಟನೆಯ ನಡುವೆಯೇ ಇಂದು ಅಂಗೀಕಾರಗೊಂಡಿದೆ.

2011ನೇ ಸಾಲಿನ ವಿವಾದಿತ ಕೆಎಎಸ್ ಅಧಿಕಾರಿಗಳ ನೇಮಕಾತಿ ಸಕ್ರಮ ಮಾಡುವ ವಿಧೇಯಕ ಇದಾಗಿದೆ. ನೇಮಕಾತಿ ಸಕ್ರಮ ಮಾಡಲು ಈ ವಿಧೇಯಕ ತರಲಾಗಿದೆ. ವಿವಿಧ ಹಂತದ ಕಾನೂನು ಸಮರದ ಬಳಿಕ ಆರೋಪವನ್ನು ತಳ್ಳಿಹಾಕಲಾಗಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಸಮರ್ಥಿಸಿಕೊಂಡರು.

ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ನಿವೇಶನ ಖರೀದಿಸುವ ಗ್ರಾಹಕರಿಗೆ ಆಸ್ತಿ ನೋಂದಣಿ ಸುಲಭವಾಗಿ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, ರಾಜ್ಯದಲ್ಲಿ ಕಂಪನಿಗಳ ವಿಲೀನ, ಮೂಲ ಕಂಪನಿ ಜತೆ ವಿಲೀನ ಅಥವಾ ಪುನರ್‌ ಸ್ಥಾಪನೆ ಮೇಲೆ ನೋದಣಿಗೆ ಗರಿಷ್ಠ ಮುಂದ್ರಾಂಕ ಶುಲ್ಕವನ್ನು 25 ಕೋಟಿ ರೂಪಾಯಿಗೆ ಮಿತಿಗೊಳಿಸುವ ಕರ್ನಾಟಕ ಮುದ್ರಾಂಕ (ಎರಡನೇ ತಿದ್ದುಪಡಿ) ವಿಧೇಯಕ ಮತ್ತು ಅಪಾದಿತರಿಂದ ರಾಜ್ಯದಲ್ಲಿ ಇಡಿ ಜಪ್ತಿ ಮಾಡಿದ ವಸ್ತುಗಳನ್ನು ರಾಜ್ಯಕ್ಕೆ ವಶಪಡಿಸಿಕೊಳ್ಳುವ ಸಂಬಂಧ ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ (ಕರ್ನಾಟಕ ತಿದ್ದುಪಡಿ), ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಂಗೀಕರಿಸಿದರು.

ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ ಅಂಗೀಕಾರ : ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ನಿವೇಶನ ಖರೀದಿಸುವ ಗ್ರಾಹಕರಿಗೆ ಆಸ್ತಿ ನೋಂದಣಿ ಸುಲಭವಾಗಿ ಮಾಡಿಕೊಡುವ ಮತ್ತು ಡಿಜಿಟಲ್ ವ್ಯವಸ್ಥೆಗೆ ಮಾನ್ಯತೆ ನೀಡುವ ಸಂಬಂಧ ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು.

ವಿಧೇಯಕ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ನೊಂದಾಯಿತ ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘದಿಂದ ಹಂಚಿಕೆಯಾದ ನಿವೇಶನವನ್ನು ಭೋಗ್ಯ ಮತ್ತು ಮಾರಾಟ (ಲೀಸ್ ಕಮ್ ಸೇಲ್) ಕರಾರು ಮಾಡಿಕೊಂಡಿದ್ದು, ಅಂತಹ ನಿವೇಶನವನ್ನು ಹಸ್ತಾಂತರ (ಆಸ್ತಿಯ ಹಕ್ಕು ಹಸ್ತಾಂತರ) ಮಾಡುವ ಸಂದರ್ಭದಲ್ಲಿ ಕರಾರು ಬರೆದುಕೊಟ್ಟ ದಿನಾಂಕದಂದು ಇರುವ ಮಾರುಕಟ್ಟೆಯ ಮೌಲ್ಯವನ್ನು ಪರಿಗಣಿಸಿ ಮುದ್ರಾಂಕ ಶುಲ್ಕ ವಿಧಿಸಲಾಗುತ್ತದೆ.

ಗ್ರಾಹಕರಿಗೆ ಸರಳೀಕೃತವಾಗಲು ಈ ಕ್ರಮಕೈಗೊಳ್ಳಲಾಗಿದೆ. ಕರಾರು ಬರೆದುಕೊಟ್ಟ ದಿನಾಂಕ ಮತ್ತು ನೋಂದಣಿ ಮಾಡಿಕೊಳ್ಳುವ ದಿನಾಂಕದಂದು ಮುದ್ರಾಂಕ ಶುಲ್ಕದಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತದೆ. ಇದನ್ನು ತಪ್ಪಿಸಲು ಈ ವಿಧೇಯಕ ತರಲಾಗಿದೆ ಎಂದು ತಿಳಿಸಿದರು.

ಇನ್ನು, ಡಿಜಿಟಲ್ ವ್ಯವಸ್ಥೆಗೆ ಕಾನೂನು ಮಾನ್ಯತೆ ನೀಡಲು ಈ ವಿಧೇಯಕದ ಮೂಲಕ ಸಾಧ್ಯವಾಗಲಿದೆ. ಹೊಸ ಜವಳಿ ನೀತಿಯಲ್ಲಿ ಹಲವು ವಿನಾಯಿತಿಗಳನ್ನು ನೀಡಲಾಗಿದೆ. ಇದಕ್ಕೆ ಉತ್ತೇಜನ ನೀಡಲು ಮತ್ತು ಸಹಕಾರಿಯಾಗಲು ವಿಧೇಯಕ ತರಲಾಗಿದೆ ಎಂದು ಮಾಹಿತಿ ನೀಡಿದರು. ಜೊತೆಗೆ ಕೈಗಾರಿಕೆಗಳು ರಾಜ್ಯದಲ್ಲಿ ಹೆಚ್ಚು ಬರಬೇಕು ಎಂಬ ಉದ್ದೇಶದಿಂದ ಕರ್ನಾಟಕ ಸ್ಟಾಂಪು (ಎರಡನೇ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಗಿದೆ.

ನಂತರ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಕಂಪನಿಗಳ ವಿಲೀನ ಅಥವಾ ಮಾಲೀಕತ್ವ ವರ್ಗಾವಣೆ ವೇಳೆ ಮುದ್ರಾಂಕ ಶುಲ್ಕ ನಿಗದಿಗೊಳಿಸಿಲ್ಲ. ಹೀಗಾಗಿ ಷೇರುಗಳ ಮೌಲ್ಯ ಹೆಚ್ಚಿರುವ ಕಂಪನಿಗಳು ಹೆಚ್ಚು ಮುದ್ರಾಂಕ ಶುಲ್ಕ ಪಾವತಿಸಲಾಗದೇ ಹೊರ ರಾಜ್ಯಗಳಿಗೆ ಕೈಗಾರಿಕೆಗಳು ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ಒಂದು ನೋಂದಣಿಗೆ ಗರಿಷ್ಠ ಮುದ್ರಾಂಕ ಶುಲ್ಕ ಸಂಗ್ರಹವನ್ನು 25 ಕೋಟಿ ರು.ಗೆ ಮಿತಿಗೊಳಿಸಿ ವಿಧೇಯಕವನ್ನು ತರಲಾಗಿದೆ ಎಂದು ಹೇಳಿದರು.

ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ ಮಂಡನೆ: ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಿಂದ ಜಪ್ತಿಯಾದ ವಸ್ತುಗಳು ರಾಜ್ಯ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ ಅಂಗೀಕರಿಸಲಾಯಿತು.

ಗೃಹ ಸಚಿವರ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಆರ್ಥಿಕ ಅಪರಾಧ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಸ್ತುಗಳ ತನಿಖೆ ಮತ್ತು ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ ಮಾತ್ರ ಅಧಿಕೃತ ಏಜೆನ್ಸಿಯಾಗಿರುತ್ತದೆ. ಇಡಿ ಕೇಂದ್ರದ ಇಚ್ಛೆಯಗುಣವಾಗಿ ತೆಗೆದುಕೊಳ್ಳುತ್ತದೆ.

ರಾಜ್ಯದಲ್ಲಿ ಪ್ರತಿ ವರ್ಷ ಬಹಳಷ್ಟು ದೊಡ್ಡ ಸಂಖ್ಯೆಯ ಆರ್ಥಿಕ ಅಪರಾಧ ಪ್ರಕರಣಗಳನ್ನು ನೊಂದಾಯಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಇರುವ ಕಾನೂನಿನಲ್ಲಿ ಜಪ್ತಿ ಮಾಡಲು ಅವಕಾಶ ಇಲ್ಲದಿರುವ ಕಾರಣ ರಾಜ್ಯವು ಅಸಹಾಯಕವಾಗಿದೆ. ಹೀಗಾಗಿ ವಿಧೇಯಕಕ್ಕೆ ತಿದ್ದುಪಡಿ ತಂದು ಆರ್ಥಿಕ ಅಪರಾಧಗಳಿಗೊಳಗಾದವರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *