ಬೆಂಗಳೂರು: ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಹೈಕೋರ್ಟ್ ನಗರದಲ್ಲಿ ಇನ್ನು ಮುಂದೆ ಯಾವುದೇ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.
ಮೇಕೆದಾಟು ಯೋಜನೆ ಅನುಷ್ಠಾನದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಪಾದಯಾತ್ರೆಯಿಂದಾಗಿ ಬೆಂಗಳೂರು ನಗರದಲ್ಲಿ ವಾಹನಗಳ ದಟ್ಟಣೆಯಿಂದಾಗಿ ಸಾರ್ವಜನಿಕರು ತೀವ್ರತರ ತೊಂದರೆ ಅನುಭವಿಸಿದ್ದಾರೆ. ಅಲ್ಲದೆ, ಸ್ವತಃ ನ್ಯಾಯಾಧೀಶರೇ ಟ್ರಾಫಿಕ್ ನಲ್ಲಿ ಸಿಲುಕಿ ನ್ಯಾಯಾಲಯಕ್ಕೆ ತಡವಾಗಿ ಬರಬೇಕಾದ ಪರಿಸ್ಥಿತಿ ಉಂಟಾಯಿತು. ಎನ್ನಲಾಗಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ಥಿ ಹಾಗೂ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠವು ಇನ್ನು ಮುಂದೆ ನಗರದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.
ತೀವ್ರ ಅಸಮಾಧಾನಗೊಂಡ ನ್ಯಾಯಾಲಯವು ವಿಚಾರಣೆಯಲ್ಲಿ ಈ ಆದೇಶ ನೀಡಿದ್ದು, ಫ್ರೀಡಂಪಾರ್ಕ್‍ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿ ಆ ಸಂದರ್ಭದಲ್ಲೂ ಕೂಡ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಎಂದಿದೆ.
ಪ್ರತಿಭಟನೆ ನಡೆಯುವ ವೇಳೆ ಜನರ ದಿನನಿತ್ಯದ ಚಟುವಟಿಕೆಗಳಿಗೆ, ವಹಿವಾಟುಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದೆ. ಮೇಕ್ರಿ ಸರ್ಕಲ್‍ನಿಂದ ಹೈಕೋರ್ಟ್ ತಲುಪಲು ನ್ಯಾಯಾಧೀಶರಾದ ನಮಗೇ ಒಂದು ಗಂಟೆ ಬೇಕಾಯಿತು. ಇನ್ನು ಜನಸಾಮಾನ್ಯರ ಪಾಡೇನು? ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಓಡಾಡುವುದು ಹೇಗೆ ಎಂದು ಪ್ರಶ್ನಿಸಿದ ನ್ಯಾಯಾಲಯ ಇದಕ್ಕೆಲ್ಲ ಕೂಡಲೇ ನಿರ್ಬಂಧ ವಿಧಿಸಿ ಎಂದು ಸೂಚಿಸಿದೆ.