ಕಾಂಗ್ರೆಸ್‌ ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 35 ಜನರ‌ ವಿರುದ್ಧ ಪ್ರಕರಣ ದಾಖಲು

ರಾಮನಗರ: ವಾರಾಂತ್ಯ ಕರ್ಫ್ಯೂ ಆದೇಶ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ 35 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಕನಕಪುರ ತಾಲ್ಲೂಕಿನ ಸಂಗಮ ಪ್ರದೇಶದ ಸುತ್ತಮುತ್ತ‌ ವಾರಾಂತ್ಯದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿತ್ತು. ಇದನ್ನು ಉಲ್ಲಂಘಿಸಿ, ಜನರನ್ನು ಸೇರಿಸಿ ಪಾದಯಾತ್ರೆ ಮಾಡಿದ ಕಾರಣ ವಿಪತ್ತು‌ ನಿರ್ವಹಣಾ ಕಾಯ್ದೆ ಅಡಿ ಸಾತನೂರು ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ನೀರಿಗಾಗಿ ನಡಿಗೆ’  ಮೇಕೆದಾಟು ಯೋಜನೆ ಶೀಘ್ರ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದೆ. ನಿನ್ನೆ ಮೊದಲ ದಿನದ ಪಾದಯಾತ್ರೆ ಸಾತನೂರಿನಲ್ಲಿ ಅಂತ್ಯವಾಗಿದ್ದು ಇಂದು ಕನಕಪುರದ ಕಡೆ ಮುಂದುವರೆಯಲಿದೆ.

 

 

ಕೋವಿಡ್ ಪರೀಕ್ಷೆಗೆ ನಿರಾಕರಿಸಿದ ಡಿಕೆಶಿ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿರುವ ಕಾಂಗ್ರೆಸ್ ಪಾದಯಾತ್ರೆಯ ಮೊದಲ ದಿನದ ಸಂಜೆಯ ಹೊತ್ತಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಕೋವಿಡ್ ಟೆಸ್ಟ್ ನೀಡಿ ಎಂದು ಕೇಳಿದ ಅಧಿಕಾರಿ ವಿರುದ್ಧ ಡಿಕೆಶಿ ಗರಂ ಆಗಿ, ಕೋವಿಡ್ ಟೆಸ್ಟ್ ಕೊಡಲ್ಲ ಬೇಕಾದ್ರೆ ಕೇಸ್ ಹಾಕಿ, ತಿಹಾರ್ ಜೈಲು ನೋಡಿದ್ದಾಯ್ತು ಈಗ ರಾಮನಗರ ಜೈಲು ನೋಡನ ಎಂದರು.

ಪಾದಯಾತ್ರೆಯನ್ನು ದೊಡ್ಡಾಲಹಳ್ಳಿಯ ಅಂತ್ಯ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಹೆಚ್ಚುವರಿ ಜವರೇಗೌಡ ನೇತೃತ್ವದ ಅಧಿಕಾರಿಗಳ ತಂಡವು ಅಲ್ಲಿಗೆ ಬಂದಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿತು. ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ರೀತಿ ನಡುವಳಿಕೆಯನ್ನ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಂದ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನು ಕಳುಹಿಸಿದ್ದು ಯಾರು? ಎಂದರು.

ಏನ್ ಟೆಸ್ಟ್ ಮಾಡದು? ಏನನ್ನ ಟೆಸ್ಟ್ ಮಾಡದು? ಬೇಕಾದರೆ ಅವನು ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಏಕವಚನದಲ್ಲಿ ಮಾತನಾಡಿದರು. ನೀವು ನನ್ನ ಆರೋಗ್ಯ ಕಾಳಜಿಯ ಮೆರೆಗೆ ಬಂದ್ದಿದೀರ, ಆದರೆ ನಾನು ಯಾವುದೇ ಪರೀಕ್ಷೆ ಕೊಡಲ್ಲ. ನಾನು ಫಿಟ್ ಆಗಿದ್ದೇನೆ. ಹದಿನೈದು ಕಿಲೋಮೀಟರ್ ನಡೆದಿದ್ದೇನೆ. ಎಲ್ಲಾದ್ರೂ ಜಗ್ಗಿದೀನ ಎಂದು ಕೋವಿಡ್ ಪರೀಕ್ಷೆ ಮಾಡಲು ಬಂದವರನ್ನು ಪ್ರಶ್ನಿಸಿದರು.

ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿರುವ ಸರ್ಕಾರದ ವಿರುದ್ಧವೂ ಖಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ನನಗೆ ದೇಶದ ಕಾನೂನು ಗೊತ್ತು, ಗೃಹ ಸಚಿವರಿಗೋ, ಆರೋಗ್ಯ ಸಚಿವರಿಗೋ ಅಥವಾ ಮುಖ್ಯಮಂತ್ರಿಗೋ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗಿರಬಹುದು ಅವರು ಟೆಸ್ಟ್ ಮಾಡಿಸಿಕೊಳ್ಳಲಿ, ನಾನು ಮಾಡಿಸಲ್ಲ ಎಂದು ಹೇಳಿದರು.

ಈ ವೇಳೆ ಕೊರೊನಾ ವೇಳೆಯಲ್ಲಿ ತಾವು ಸಂತ್ರಸ್ತರಿಗೆ ನೆರವಾಗಿರುವ ಬಗ್ಗೆಯೂ ಮಾಹಿತಿ ಹಂಚಿಕೊಂಡ ಡಿ.ಕೆ. ಶಿವಕುಮಾರ್, ಕೋವಿಡ್-19 ನಿಂದ ಸಾವುಗಳಾದಗ ಸಂಸದ ಡಿ ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಮೃತ ದೇಹಗಳನ್ನು ಹೂಳಿದ್ದಾರೆ, ಎಷ್ಟೋ ಕೋವಿಡ್ ಪೀಡಿತ ಕುಟುಂಬಗಳಿಗೆ ಧನ ಸಹಾಯವನ್ನೂ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಆಕ್ಸಿಜನ್ ಸೇವೆಯನ್ನೂ ನೀಡಿತ್ತು ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *