ನವದೆಹಲಿ: ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿಗರಾದ 90 ಶಾಸಕರು ನೆನ್ನೆ(ಸೆಪ್ಟಂಬರ್ 25) ರಾತ್ರಿ ವಿಧಾನ ಸಭಾಧ್ಯಕ್ಷ ಸಿ ಪಿ ಜೋಶಿ ಅವರನ್ನು ಭೇಟಿ ಮಾಡಿದೆ.
ಮುಂದಿನ ತಿಂಗಳು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಹೊಸ ಅಧ್ಯಕ್ಷರಾಗಿ ಅಶೋಕ್ ಗೆಹ್ಲೋಟ್ ಆಯ್ಕೆಯಾದರೆ ರಾಜಸ್ಥಾನ ಸರ್ಕಾರದ ನಾಯಕತ್ವದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಆದರೆ, ಆ ಸಭೆಗೂ ಮೊದಲೇ 90 ಶಾಸಕರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಇನ್ನೂ ಅಧಿಕೃತ ವರದಿ ಹೊರಬಿದ್ದಿಲ್ಲ.
ಆದರೆ, ಶಾಸಕರು ದೆಹಲಿರುವ ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಂಪರ್ಕಕ್ಕೆ ಅಲಭ್ಯರಾಗಿದ್ದಾರೆ. ‘ಕೇಂದ್ರ ನಾಯಕರನ್ನು ಭೇಟಿ ಮಾಡಲು ಶಾಸಕರು ಮುಕ್ತರಾಗಿದ್ದಾರೆ, ಆದರೆ ಇಂದಿನಿಂದ ನವರಾತ್ರಿ ಆರಂಭವಾಗಿದ್ದು ಶಾಸಕರು ಮನೆಗೆ ತೆರಳಬೇಕಾಗಿದೆʼ ಎಂದು ಹಿರಿಯ ಶಾಸಕ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ.
2018ರ ಡಿಸೆಂಬರ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಸಮಸ್ಯೆ ಬಗೆಹರಿದು, ಭಿನ್ನಾಭಿಪ್ರಾಯ ಕೊನೆಗೊಂಡಿತು. ನಂತರ ಜುಲೈ 2020ರಲ್ಲಿ ಸಚಿನ್ ಪೈಲಟ್ ಜೊತೆಗೆ ಕಾಂಗ್ರೆಸ್ ಪಕ್ಷದ 18 ಶಾಸಕರು ಅಶೋಕ್ ಗೆಹ್ಲೋಟ್ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಕ್ಕಟ್ಟು ಪರಿಹರಿಸಲು ಶಾಸಕರೊಂದಿಗೆ ಏಕಕಾಲದಲ್ಲಿ ಮಾತುಕತೆ ನಡೆಸುವಂತೆ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರಿಗೆ ಸೂಚಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರು ಸಿಎಲ್‌ಪಿ ಸಭೆಗೆ ಶಾಸಕರು ಆಗಮಿಸುತ್ತಾರೆ ಎಂದು ಕಾಯುತ್ತಿದ್ದರು. ಆದರೆ, ಸಭೆ ನಡೆಯದ ಕಾರಣ ಅವರು ದೆಹಲಿಗೆ ಹಿಂತಿರುಗಿದ್ದಾರೆ.
ಅಶೋಕ್ ಗೆಹ್ಲೋಟ್ ಬಣದವರು, ಮುಂದಿನ ರಾಜಸ್ಥಾನ ಮುಖ್ಯಮಂತ್ರಿಯ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿಯುವವರೆಗೆ ತೆಗೆದುಕೊಳ್ಳಬಾರದು. ಚುನಾವಣೆ ಮುಗಿದ ಬಳಿಕವೇ ನಿರ್ಧರಿಸಬೇಕು. ಅಕ್ಟೋಬರ್ 19ರೊಳಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿಯಲಿದೆ. ಕಾಂಗ್ರೆಸ್ ವೀಕ್ಷಕರಿಗೆ ಅಶೋಕ್ ಗೆಹ್ಲೋಟ್ ಬಣದವರು ಒಬ್ಬೊಬ್ಬರನ್ನಾಗಿ ಪ್ರತ್ಯೇಕ ಭೇಟಿಯಾಗಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಿಗೇ ಭೇಟಿಯಾಗಲು ಬಯಸುವುದಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಹೇಳಿದ್ದಾರೆ ಎನ್ನಲಾಗಿದೆ.
ರಾಜಸ್ಥಾನದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ಅಶೋಕ್ ಗೆಹ್ಲೋಟ್ ಅವರ ಅಭಿಪ್ರಾಯವನ್ನು ಪರಿಗಣಿಸಬೇಕು. 2020ರಲ್ಲಿ ಸಚಿನ್ ಪೈಲಟ್ ಬೆಂಬಲಿಗರ ಬಂಡಾಯದ ಸಂದರ್ಭದಲ್ಲಿ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರ ಬೆಂಬಲಕ್ಕೆ ನಿಂತವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಸಚಿನ್ ಪೈಲಟ್ಗಾಗಲಿ ಅಥವಾ ಅವರ ಬಣದವರಿಗಾಗಲಿ ನೀಡಬಾರದು ಎಂದು ಶಾಸಕರು ಒತ್ತಿ ಹೇಳಿದ್ದಾರೆ.
ಈ ವರ್ಷ ಉದಯಪುರದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಉನ್ನತ ಸಭೆಯಲ್ಲಿ ನಿರ್ಧರಿಸಿದಂತೆ ಪಕ್ಷವು “ಒಬ್ಬ ವ್ಯಕ್ತಿ ಒಂದು ಹುದ್ದೆ” ನಿಯಮಕ್ಕೆ ಅಂಟಿಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಿ ಹೇಳಿದ್ದರು. ಈ ಬೆಳವಣಿಗೆಯಿಂದಾಗಿ ಇದೀಗ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ.
ಕಾಂಗ್ರೆಸ್ ಮುಖಂಡ ಕೆ ಸಿ ವೇಣುಗೋಪಾಲ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ವೇಣುಗೋಪಾಲ್ ಅವರನ್ನು ಕೇರಳದಿಂದ ದೆಹಲಿಗೆ ಕಳುಹಿಸಿದ ರಾಹುಲ್ ಗಾಂಧಿ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿ ಮಾತುಕತೆ ನಡೆಸಿದರು. ರಾಹುಲ್ ಗಾಂಧಿ ಪ್ರಸ್ತುತ ಕೇರಳದಲ್ಲಿ ಪಕ್ಷದ ಭಾರತ ಐಕ್ಯತಾ ಯಾತ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿರುವದರಿಂದ ತನ್ನ ಅನುಕೂಲಕ್ಕೆ ಬಳಸಿಕೊಳ್ಳು ಮುಂದಾಗಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಷ್ಟ್ರಪತಿ ಆಳ್ವಿಕೆ ಹೇರುವ ಸುಳಿವನ್ನು ನೀಡಿದೆ. ಪ್ರತಿಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ.