2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ವಿಪಕ್ಷಗಳ ರಣತಂತ್ರ
ಬೆಂಗಳೂರು: ತಮ್ಮ ಪಕ್ಷಕ್ಕೆ ಅಧಿಕಾರ ಅಥವಾ ಪ್ರಧಾನಿ ಹುದ್ದೆಯ ಬಗ್ಗೆ ಆಸಕ್ತಿ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ರಣತಂತ್ರ ರೂಪಿಸಲು ನಗರದಲ್ಲಿ 26 ವಿರೋಧ ಪಕ್ಷಗಳ ನಾಯಕರ ನಡುವೆ ಮಾತುಕತೆಯ ವೇಳೆ ಖರ್ಗೆ ಈ ಹೇಳಿಕೆ ನೀಡಿದ್ದಾರೆ.
“ಕಾಂಗ್ರೆಸ್‌ಗೆ ಅಧಿಕಾರ ಅಥವಾ ಪ್ರಧಾನಿ ಹುದ್ದೆಯ ಬಗ್ಗೆ ಆಸಕ್ತಿ ಇಲ್ಲ. ಈ ಸಭೆಯಲ್ಲಿ ನಮ್ಮ ಉದ್ದೇಶ ನಮಗಾಗಿ ಅಧಿಕಾರ ಗಳಿಸುವುದಲ್ಲ. ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸುವುದು” ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.
ಬಿಜೆಪಿಯನ್ನು ಗುರಿಯಾಗಿಸಿದ ಖರ್ಗೆ, “ನಮ್ಮ 26 ಪಕ್ಷಗಳ ಸರ್ಕಾರ ದೇಶದ 11 ರಾಜ್ಯಗಳಲ್ಲಿ ಆಡಳಿತದಲ್ಲಿವೆ. ಬಿಜೆಪಿ 303 ಸ್ಥಾನಗಳನ್ನು ಸ್ವತಃ ಪಡೆಯಲಿಲ್ಲ, ಮಿತ್ರಪಕ್ಷಗಳ ಮತಗಳನ್ನು ಬಳಸಿ ನಂತರ ಅವರನ್ನು ತಿರಸ್ಕರಿಸಿತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಪಕ್ಷಗಳ ಒಕ್ಕೂಟದ ಮಹಾಮೈತ್ರಿ ಸಭೆ ಆರಂಭ : ಸಭೆಯಲ್ಲಿ ಚರ್ಚೆಯಾದ ಆರು ಅಂಶಗಳು ಇಲ್ಲಿದೆ!
At the joint Opposition meeting in Bengaluru, Congress President Mallikarjun Kharge said – We are aware that at the state level, there are differences between some of us. These differences are not ideological. These differences are not so big that we cannot put them behind us for… pic.twitter.com/sCKTAGO0Cc
— ANI (@ANI) July 18, 2023
“ರಾಜ್ಯ ಮಟ್ಟದಲ್ಲಿ ನಮ್ಮಲ್ಲಿ ಕೆಲವರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ನಮಗೆ ತಿಳಿದಿದೆ. ಈ ಭಿನ್ನಾಭಿಪ್ರಾಯಗಳು ಸೈದ್ಧಾಂತಿಕವಲ್ಲ. ಈ ಭಿನ್ನಾಭಿಪ್ರಾಯಗಳು ಸಾಮಾನ್ಯ ಮತ್ತು ಮಧ್ಯಮ ವರ್ಗದವರ, ಯುವಕರಿರ, ಬಡವರ, ದಲಿತರ, ಆದಿವಾಸಿಗಳ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ತೆರೆಮರೆಯಲ್ಲಿ ಮೌನವಾಗಿ ಹತ್ತಿಕ್ಕಲಾಗುವುದಕ್ಕಿಂತ ದೊಡ್ಡದಲ್ಲ” ಎಂದು ಖರ್ಗೆ ಹೇಳಿದ್ದಾರೆ.
ಎರಡು ದಿನಗಳ ಸಭೆಯಲ್ಲಿ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಪಿಐಎಂ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಮುಖ್ಯಮಂತ್ರಿಗಳಾದ ಎಂ.ಕೆ. ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೆನ್, ಮಮತಾ ಬ್ಯಾನರ್ಜಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಶರದ್ ಪವಾರ್ ಕೂಡ ಈ ಸಭೆಯ ಭಾಗವಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭ : ಸಿಎಂ ಸಿದ್ದರಾಮಯ್ಯ ಭವಿಷ್ಯ
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧಪಕ್ಷಗಳ ಮೈತ್ರಿಕೂಟಕ್ಕೆ ಹೆಸರು, ರಚನೆ ಮತ್ತು ಸಾಮಾನ್ಯ ಕಾರ್ಯಸೂಚಿಯನ್ನು ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಸೋಮವಾರ ರಾತ್ರಿ ನಡೆದ ಔತಣಕೂಟದಲ್ಲಿ ಗುಂಪಿನ ಹೆಸರನ್ನು ಸೂಚಿಸಲು ಎಲ್ಲಾ ಪಕ್ಷಗಳನ್ನು ಕೇಳಲಾಗಿದ್ದು, ನಾಲ್ಕೈದು ಹೆಸರುಗಳು ಈಗ ಪರಿಗಣನೆಯಲ್ಲಿವೆ. ಹೊಸ ಗುಂಪಿನ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರ ಹೆಸರನ್ನು ಪಕ್ಷಗಳು ಸೋಮವಾರ ಸೂಚಿದ್ದವು, ಹೀಗಾಗಿ ಅವರೇ ಅಧ್ಯಕ್ಷರಾಗುವ ಸಾಧ್ಯತೆಯಿದೆ.
ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಹೊಸ ಮೈತ್ರಿಕೂಟದ ಹೆಸರಿನಲ್ಲಿ “ಭಾರತ” ಪದದ ಬದಲಿಗೆ ಬೇರೆ ಪದ ಬಳಸುವಂತೆ ಪ್ರಸ್ತಾಪಿಸಿದ್ದು, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮೈತ್ರಿಕೂಟದಿಂದ “ಫ್ರಂಟ್” ಪದವನ್ನು ಕೈಬಿಡಲು ಶಿಫಾರಸು ಮಾಡಿದ್ದಾರೆ. “ಯುನೈಟೆಡ್ ವಿ ಸ್ಟ್ಯಾಂಡ್” ಎಂಬ ಟ್ಯಾಗ್ ಲೈನ್ ಇರಲಿದೆ ಎಂದು ವರದಿಯಾಗಿದೆ.
ಸಂವಹನದ ಅಂಶಗಳೊಂದಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಅಂತಿಮಗೊಳಿಸಲು ಮತ್ತು ಜಂಟಿಯಾಗಿ ಅನುಸರಿಸಬೇಕಾದ ವಿಷಯಗಳ ಬಗ್ಗೆ ನೀಲನಕ್ಷೆಯನ್ನು ರಚಿಸಲು ವಿರೋಧ ಪಕ್ಷಗಳು ಇಂದು ಎರಡು ಉಪಸಮಿತಿಗಳನ್ನು ಘೋಷಿಸುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆ ವೇಳೆ ವಿರೋಧ ಪಕ್ಷಗಳ ನಡುವೆಯೆ ಸಂಘರ್ಷ ಮತ್ತು ಮುಖಾಮುಖಿ ಇರುವ ಸಂಭಾವ್ಯ ಕ್ಷೇತ್ರಗಳನ್ನು ಗುರುತಿಸಲು ಕೂಡಾ ಈ ಸಭೆ ಪ್ರಯತ್ನಿಸಲಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಿಂಸಾಚಾರ ದಾಳಿ: ಮೆಟ್ಟಿನಿಂತ ಸಿಪಿಐ(ಎಂ), ಎಡ ಶಕ್ತಿಗಳು