ವಿಧಾನಸಭೆ ನೂತನ ಸ್ಪೀಕರ್ ಆಗಿ ಸರ್ವಾನುಮತದಿಂದ ಯುಟಿ ಖಾದರ್ ಆಯ್ಕೆ

ಬೆಂಗಳೂರು: ನಿರೀಕ್ಷೆಯಂತೆ ಯುಟಿ ಖಾದರ್ ಅವರು ಸರ್ವಾನುಮತದಿಂದ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.  ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯುಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾವನೆ ಮಾಡಿದರು. ಸಿಎಂ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅನುಮೋದಿಸಿದರು ಎಲ್ಲಾ ಶಾಸಕರು ಪ್ರಸ್ತಾಪವನ್ನು ಬೆಂಬಲಿಸಿ ಸರ್ವಾನುಮತದಿಂದ ಆಯ್ಕೆ ಮಾಡಿದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ,  ವಿಧಾನಸಭೆಯಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಯು.ಟಿ.ಖಾದರ್​ ಅವರಿಗೆ ಸದನವೀರ ಪ್ರಶಸ್ತಿಯೂ ಸಿಕ್ಕಿತ್ತು. ವಿಪಕ್ಷ ಉಪನಾಯಕರಾಗಿಯೂ ಯು.ಟಿ.ಖಾದರ್​ ಉತ್ತಮ ಕೆಲಸ ಮಾಡಿದ್ದಾರೆ. ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಸದನ ಮೇಲ್ಮಟ್ಟಕ್ಕೆ ಹೋಗಲಿ. ಖಾದರ್​ ಬಹಳ ತಾಳ್ಮೆ ವ್ಯಕ್ತಿ, ಆ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ವಿಧಾನಸಭೆಯಲ್ಲಿ ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚಿಸಬೇಕು. ನಾಡಿನ ಅಭಿವೃದ್ಧಿ, 7 ಕೋಟಿ ಕನ್ನಡಿಗರ ಹಿತರಕ್ಷಣೆ ಆಗಬೇಕು. ರಾಜ್ಯದ ಜಿಡಿಪಿ ಬೆಳವಣಿಗೆ ಕೂಡ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲೊ್ಲಿ ಸ್ಪೀಕರ್ ಸ್ಥಾನ ಅತ್ಯುನ್ನತವಾದದ್ದು. ಸದನದಲ್ಲಿ ನಾವು ಬಹಳ ಹೆಚ್ಚರಿಕೆಯಿಂದ ಪದ ಬಳಕೆ ಮಾಡಬೇಕು. ಆಡಳಿತ, ವಿರೋಧ ಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಬೇಕು ಎಂದರು.

ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ನೂತನ ಸ್ಪೀಕರ್​ ಖಾದರ್​ಗೆ ಅಭಿನಂದನೆ ತಿಳಿಸಿ ಮಾತನಾಡಿದ ಅವರು, ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇ ಆದ ಇತಿಹಾಸವಿದೆ. ಇಡೀ ದೇಶಕ್ಕೆ ಮಾರ್ಗದರ್ಶನ ನೀಡಿದ ವಿಧಾನಮಂಡಲವಿದು, ಯು.ಟಿ.ಖಾದರ್​ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಯು.ಟಿ.ಖಾದರ್ ವಿಪಕ್ಷ ಉಪನಾಯಕರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ಈ ಹಿಂದೆ ಸ್ಪೀಕರ್​ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ನ್ಯಾಯಾಂಗಕ್ಕಿಂತ ಎತ್ತರವಾದದ್ದು ಸ್ಪೀಕರ್​ ಸ್ಥಾನ. ಹಾಗಾಗಿ ನಿಷ್ಪಕ್ಷಪಾತವಾಗಿ ತಾವು ಸದನವನ್ನು ನಡೆಸಬೇಕು. ಪ್ರತಿಪಕ್ಷ ಸದಸ್ಯರ ಹೇಳಿಕೆಗೆ ಸ್ಪೀಕರ್​ ಹೆಚ್ಚು ಅವಕಾಶ ಕೊಡಬೇಕು. ಚರ್ಚೆ ವೇಳೆ ಕೊನೆಯ ಸಾಲಿನವರಿಗೆ ಹೆಚ್ಚು ಅವಕಾಶ ಕೊಡಬೇಕು. ಸ್ಪೀಕರ್ ಹೊಸ ವಿಚಾರಕ್ಕೆ ಅವಕಾಶ ಮಾಡಿಕೊಡುವ ವಿಶ್ವಾಸವಿದ್ದು, ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ ಎಂದು ಹೇಳಿದರು.

ಇದನ್ನೂ ಓದಿಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಯುಟಿ ಖಾದರ್ ನಾಮಪತ್ರ ಸಲ್ಲಿಕೆ

ನೂತನ ಸ್ಪೀಕರ್ ಯು.ಟಿ.ಖಾದರ್​ಗೆ ಅಭಿನಂದನೆ ತಿಳಿಸಿದ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಯು.ಟಿ.ಖಾದರ್​ರನ್ನು ಸೇವಾದಳ ಕಾರ್ಯಕರ್ತನಾಗಿ ನೋಡಿದ್ದೇನೆ. ಸ್ಪೀಕರ್ ಸ್ಥಾನ ಬಹಳ ಶ್ರೇಷ್ಠವಾದದ್ದು. ಈ ಹಿಂದೆ ರಮೇಶ್ ಕುಮಾರ್ ಯುವ ಶಾಸಕರನ್ನು ಎಬ್ಬಿಸುತ್ತಿದ್ದರು. ನಾವು ತಪ್ಪು ಮಾಡದಂತೆ ವಿಪಕ್ಷದವರು ಎಚ್ಚರಿಕೆ ಕೊಡುತ್ತಿರಲಿ. ಕೋಮು ಸೌಹಾರ್ದತೆಗೆ ಮತ್ತೊಂದು ಹೆಸರು ಯು.ಟಿ.ಖಾದರ್​. ಎಲ್ಲರಿಗೂ ನೀವು ನ್ಯಾಯ ಒದಗಿಸಿ. ನಾವು ತಪ್ಪು ಮಾಡಿದರೂ ಸ್ಪೀಕರ್ ತಿದ್ದಿ ನಡೆಸಲಿ. ಸಭಾಧ್ಯಕ್ಷರು ಎಲ್ಲರನ್ನೂ ಸಮಾನವಾಗಿ ನೋಡಿ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಸಭಾಧ್ಯಕ್ಷರಾದ ಎರಡನೇ ಜನಪ್ರತಿನಿಧಿ ಖಾದರ್‌ ಆಗಿದ್ದಾರೆ. ಇದರಂತೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಬೆಳ್ತಂಗಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ. ವೈಕುಂಠ ಬಾಳಿಗಾ ಎರಡು ಬಾರಿ (1962, 1967) ಸಭಾಧ್ಯಕ್ಷರಾಗಿದ್ದರು.

 

Donate Janashakthi Media

Leave a Reply

Your email address will not be published. Required fields are marked *