ಜೈಪುರ: ದೇಶವು ಸ್ವಾತಂತ್ರ‍್ಯ ಪಡೆದು 75 ವರ್ಷ ಪೂರೈಸಿ, ಅಮೃತ ಮಹೋತ್ಸವ ಆಚರಿಸುತ್ತಿದೆ. ಇಷ್ಟು ವರ್ಷಗಳ ನಂತರವೂ ದಲಿತರ ಹಾಗೂ ಶೋಷಿತ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ತನಗೆ ತೀವ್ರ ನೋವುಂಟು ಮಾಡಿವೆ. ದಲಿತರ ಮೇಲಿನ ದೌರ್ಜನ್ಯ ಹೆಚ್ಚಳವಾಗುತ್ತಿದೆ ಎಂದು ವರದಿಗಳು ಉಲ್ಲೇಖಿಸುತ್ತಿವೆ. ಆದರೂ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಪಾನ್‌ಚಂದ್ ಮೇಘವಾಲ್ ತನ್ನ ವಿಧಾನ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ವರ್ಷದ ದಲಿತ ಶಾಲಾ ಬಾಲಕ ಕುಡಿಯುವ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ಶಾಲಾ ಶಿಕ್ಷಕರೊಬ್ಬರು ಆತನನ್ನು ಹೊಡೆದಿದ್ದರು ಪರಿಣಾಮ ಬಾಲಕ ಮೃತಪಟ್ಟಿದ್ದ. ಈ ಘಟನೆಯಾದ 2 ದಿನಗಳ ಬೆನ್ನಲ್ಲೇ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜಾಸ್ಥಾನ ಮುಖ್ಯಮಂತ್ರಿ ಹಾಗೂ ವಿಧಾನಸಭಾ ಸ್ಪೀಕರ್ ಸಿ ಪಿ ಜೋಶಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ದಲಿತ ವಿದ್ಯಾರ್ಥಿಯ ಸಾವಿನಿಂದ ನೋವಾಗಿದೆ ಎಂದೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಸಮಾಜದ ಹಕ್ಕುಗಳನ್ನು ರಕ್ಷಿಸಲು ನಾವು ವಿಫಲರಾಗಿದ್ದೇವೆ. ಹೀಗಿದ್ದೂ ನಾವು ಅಧಿಕಾರದಲ್ಲಿವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಆತ್ಮಸಾಕ್ಷಿಯಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಯಾವುದೇ ಹುದ್ದೆಗಳ ಹಂಗಿಲ್ಲದೆ ಸಮಾಜದ ಶೋಷಿತ ವರ್ಗದ ಪರವಾಗಿ ಹೋರಾಡುವೆನು. ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಶಾಸಕ ಪಾನ್‌ಚಂದ್ ಮೇಘವಾಲ್ ಮನವಿ ಮಾಡಿದ್ದಾರೆ.
ಸಂತ್ರಸ್ತ ದಲಿತ ಶಾಲಾ ಬಾಲಕನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಆರ್ಥಿಕ ನೆರವು ಸೇರಿದಂತೆ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ನಾನು ಒತ್ತಾಯಿಸಿದ್ದೇನೆ. 24 ಗಂಟೆ ಕಳೆದರೂ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ರಾಜೀನಾಮೆ ನೀಡಿರುವುದಾಗಿ ಶಾಸಕ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಕುಡಿಯುವ ನೀರಿನ ಮಡಿಕೆ ಮುಟ್ಟಿದ್ದ ಎಂದು ಖಾಸಗಿ ಶಾಲೆಯ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್‌ನನ್ನು ಜುಲೈ 20ರಂದು ಬಾಲಕನ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಹೊಡೆದಿದ್ದರು. ತೀವ್ರ ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದ ಬಾಲಕ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದ. ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಿಸಲಾಗಿತ್ತು.