ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಮೇಕೆದಾಟು ಪಾದಯಾತ್ರೆ ಮುಂದುವರಿಸುವುದರ ಔಚಿತ್ಯ ಪ್ರಶ್ನಿಸಿ ಹೈಕೋರ್ಟ್ ಛೀಮಾರಿ ಹಾಕಿದ ನಂತರ, ಹೈಕಮಾಂಡ್ ಸೂಚನೆಯಂತೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ.
ಇಂದು ರಾಮನಗರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದ್ಯಕ್ಕೆ ಮೇಕೆದಾಟು ಪಾದಯಾತ್ರೆಯನ್ನು ಮೊಟಕುಗೊಳಿಸಿ ಕೊರೋನಾ ಸೋಂಕು ತಗ್ಗಿದ ನಂತರ ಮತ್ತೆ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಮೂಲಕ ಕಾಂಗ್ರೆಸ್ ನಾಯಕರ 11 ದಿನಗಳ ಮೇಕೆದಾಟು ಪಾದಯಾತ್ರೆ 5ನೇ ದಿನಕ್ಕೆ ಅಂತ್ಯವಾಗಿದೆ. ಸರ್ಕಾರದ ಆದೇಶ ಮತ್ತು ಹೈಕೋರ್ಟ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಇಂದಿಗೆ ಪಾದಯಾತ್ರೆ ಕೊನೆಯಾಗಲಿದೆ.
ಪಾದಯಾತ್ರೆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಚರ್ಚೆಯಾಗಿದ್ದು, ನ್ಯಾಯಾಲಯ ನಾಳೆ ಪಾದಯಾತ್ರೆ ರದ್ದು ಮಾಡುವ ಬಗ್ಗೆ ಸೂಚನೆ ನೀಡಲಿದೆ ಎಂದು ಕಾನೂನು ತಜ್ಞರು ಕಾಂಗ್ರೆಸ್‌ಗೆ ಸಲಹೆ ನೀಡಿದಂತಿದೆ. ಈಗಾಗಲೆ ಕೋರ್ಟ್ ಛೀಮಾರಿ ಹಾಕಿದೆ. ಇನ್ನೂ ಮೀರಿದರೆ ಕೋರ್ಟ್ ಅಸಮಾಧಾನ ಹೊರ ಹಾಕಿ ಕಟು ಪದಗಳಿಂದ ತರಾಟೆಗೆ ತೆಗೆದುಕೊಳ್ಳಬಹುದು. ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಿತು ಎನ್ನಿಸಿಕೊಳ್ಳುವುದು ಒಂದು ರೀತಿಯ ಹಿನ್ನಡೆ ಆದಂತೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರಿತಂತೆ ಕಾಣುತ್ತದೆ. ಅದೇ ಸರ್ಕಾರ ಪಾದಯಾತ್ರೆ ಮೇಲೆ ನಿರ್ಬಂಧ ಹೇರಿದ ಕಾರಣಕ್ಕೆ ಪಾದಯಾತ್ರೆ ಕೊನೆಯಾದರೆ ಪಕ್ಷಕ್ಕೆ ಇದರಿಂದ ಲಾಭವಾಗಲಿದೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.