ಚೀನಾವು ಒಂದು ಸಮಾಜವಾದಿ ದೇಶವಾಗಿ ಸಾಧಿಸಿದ ಅದ್ಭುತ ಆರ್ಥಿಕ ಬೆಳವಣಿಗೆಯ ಕುರಿತು ಪಕ್ಷದ ಸಮ್ಮೇಳನದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮುಖಂಡರುಗಳು ಪ್ರಸ್ತಾಪ ಮಾಡಿರುವುದನ್ನು ಕೇರಳದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಆಕ್ಷೇಪಿಸಿದ್ದಾರೆ. ಸಿಪಿಐ(ಎಂ) ಮುಖಂಡರು ಚೀನಾ ದೇಶಕ್ಕೆ ನಿಷ್ಠರಾಗಿದ್ದಾರೆಂದೂ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ದೂಷಿಸಿದ್ದಾರೆ.
ಅದು ಅವರ ಕೀಳು ಮಟ್ಟದ ತಿಳುವಳಿಕೆ ಮತ್ತು ರಾಜಕಾರಣ ಎಂದು ಹೇಳಬಹುದಷ್ಟೆ. ಏಕೆಂದರೆ ಅವರು ಯಾವ ಚೀನಾವು ನಮ್ಮ ವೈರಿ ದೇಶವೆಂದು ಹೇಳುತ್ತಾರೋ, ಅದೇ ಚೀನಾದ ಜತೆ ಭಾರತವು ತನ್ನ ವಾಣಿಜ್ಯ ವ್ಯವಹಾರವನ್ನು ಹೆಚ್ಚಿಸಿಕೊಂಡಿದೆ ಎಂಬ ವಾಸ್ತವವನ್ನು ಅವರು ಮರೆಮಾಚಿದ್ದಾರೋ ಅಥವಾ ಆ ಸತ್ಯ ಅವರಿಗೆ ಗೊತ್ತಿಲ್ಲವೋ ತಿಳಿಯದು.
2019ರಲ್ಲಿ 92.8 ಬಿಲಿಯನ್ ಡಾಲರುಗಳಿದ್ದ ವ್ಯಾಪಾರವು 2020ರಲ್ಲಿ ಕೋವಿಡ್-19 ರ ಕಾರಣದಿಂದ 87.6 ಬಿಲಿಯನ್ ಡಾಲರುಗಳಿಗೆ ಎರಡೂ ದೇಶಗಳ ನಡುವಿನ ವ್ಯಾಪಾರ ಕುಸಿಯಿತು. ಆ ನಂತರ 2021 ರಲ್ಲಿ ಅದು 125 ಬಿಲಿಯನ್ ಡಾಲರಿಗಳನ್ನೂ ದಾಟಿದೆ. ಹಾಗಂದ ಮಾತ್ರಕ್ಕೆ ಭಾರತ ಸರ್ಕಾರ ಚೀನಾ ದೇಶಕ್ಕೆ ನಿಷ್ಠೆ ಹೊಂದಿದೆ ಎಂದು ಹೇಳಲಾಗುತ್ತದೆಯೇ? ಭಾರತವು ಚೀನಾದಿಂದ ದೊಡ್ಡ ಮಟ್ಟದಲ್ಲಿ ವಿದ್ಯುತ್ ಹಾಗೂ ಮೆಕ್ಯಾನಿಕಲ್ ಉಪಕರಣಗಳನ್ನು ಮತ್ತು ಮೋಟಾರು ವಾಹನಗಳ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂಬ ಸತ್ಯವನ್ನು ಕೇರಳದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮರೆಮಾಚುತ್ತಿದ್ದಾರೆ.
ಟಿ. ಸುರೇಂದ್ರರಾವ್