ಬೆಂಗಳೂರು : ಮಹಾತ್ವಾಕಾಂಕ್ಷೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಕೈಗೊಂಡಿರುವ ಪಾದಯಾತ್ರೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸದೆ ಪಾದಯಾತ್ರೆ ನಡೆಸಲಾಗುವದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ. ರಾಜ್ಯದ ಜನತೆ ಬಗ್ಗೆ ಕಾಳಜಿ ಇದ್ದರೆ ಕೇಂದ್ರದ ಮೇಲೆ ಒತ್ತಡ ಹೇರಿ ಯೋಜನೆಗೆ ಅನುಮತಿ ಪಡೆದುಕೊಂಡು ಬರಲಿ ಎಂದು ಅಗ್ರಹಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕಳೆದೆರಡು ವರ್ಷಗಳಲ್ಲಿ ಐದು ಸಭೆಗಳನ್ನು ನಡೆಸಿದರೂ ಮೇಕೆದಾಟು ಯೋಜನೆಯನ್ನು ಚರ್ಚೆಗೆತ್ತಿಕೊಳ್ಳದೆ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಾ ಬಂದಿದೆ. ನೀರಾವರಿ ಸಚಿವ ಗೋವಿಂದಪ್ಪ ಕಾರಜೋಳ ಅವರು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿ ಕಂಠಶೋಷಣೆ ಮಾಡುವ ಬದಲಿಗೆ ದೆಹಲಿಗೆ ಹೋಗಿ ಕೂತು ಯೋಜನೆಗೆ ಅನುಮತಿ ಪಡೆಯುವ ಕೆಲಸ ಮಾಡಲಿ.
ನಾನು ಮುಖ್ಯಮಂತ್ರಿಯಾಗಿದ್ದಾಗ 7-6-2017ರಂದು ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಕಳುಹಿಸಿದ್ದೆ. ತಮಿಳುನಾಡು ಎತ್ತಿದ ಆಕ್ಷೇಪಗಳಿಗೆ ಉತ್ತರನೀಡಿ ಪರಿಷ್ಕೃತ ವಿಸ್ತೃತಾ ಯೋಜನಾ ವರದಿಯನ್ನು 18-1-2019ರಂದು ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಿದ್ದಾಗ ಕಳಿಸಿಕೊಟ್ಟಿದ್ದರು. ಆ ದಿನದಿಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಮೇಕೆದಾಟು ಯೋಜನೆಗೆ ಅನುಮತಿ ಕೋರಿ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ನರೇಂದ್ರಮೋದಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಅದರ ನಂತರ ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗ ಮತ್ತೆ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿಮಾಡಿದ್ದಾರೆ. ಆಡಳಿತದಲ್ಲಿದ್ದಾಗ ನಾವು ಇನ್ನೇನು ಮಾಡಲು ಸಾಧ್ಯವಿತ್ತು?
2019ರ ಜುಲೈ 26ರಂದು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತ್ತು. ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ನೀರಾವರಿ ಸಚಿವ ಗೋವಿಂದಪ್ಪ ಕಾರಜೋಳ ಈ ಎರಡುವರೆ ವರ್ಷಗಳ ಅಧಿಕಾರವಧಿಯಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ರಾಜ್ಯದ ಬಿಜೆಪಿ ಸರ್ಕಾರ ಏನು ಮಾಡಿದೆ ಎನ್ನುವುದನ್ನು ನಾಡಿನ ಜನತೆಗೆ ತಿಳಿಸಬೇಕು.
2019ರ ಜನವರಿ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಪರಿಷ್ಕೃತ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರದ ಜಲ ಆಯೋಗದ ಅನುಮತಿಗೆ ಕಳುಹಿಸಿಕೊಟ್ಟಿದ್ದರು. ಆ ನಂತರ ಡಿ.ಕೆ ಶಿವಕುಮಾರ್ ಅವರು ಅನೇಕ ಬಾರಿ ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದ್ದೇವೆ, ಆದರೂ ಕಾಂಗ್ರೆಸ್ ಪಕ್ಷ ಈ ಯೋಜನೆ ಬಗ್ಗೆ ಗಮನ ನೀಡಿಲ್ಲ ಎಂದರೆ ಏನು ಹೇಳಬೇಕು?
ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಈಗ ನೀರಿನ ಹಂಚಿಕೆ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇಲ್ಲ, ಹಸಿರು ನ್ಯಾಯಾಧೀಕರಣ ಕೂಡ ಯಾವುದೇ ವಿರೋಧ ಮಾಡಿಲ್ಲ, ಎರಡೂ ಕಡೆ ಬಿಜೆಪಿಯವರ ಸರ್ಕಾರವೇ ಇದೆ. ಹೀಗಾಗಿ ಕೇಂದ್ರದ ಅನುಮತಿ ಪಡೆದು ಯೋಜನೆ ಆರಂಭ ಮಾಡಲು ಇರುವ ಸಮಸ್ಯೆಯಾದರೂ ಏನು? ಇದನ್ನು ಗೋವಿಂದ ಕಾರಜೋಳ ಅವರು ಸ್ಪಷ್ಟಪಡಿಸಬೇಕು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗಲ್ಲ, ರಾಜಿ ಸಂಧಾನದ ಮಾತುಕತೆ ನಡೆಸೋಣ ಎಂದು ಎಂ.ಕೆ ಸ್ಟಾಲಿನ್ ಅವರಿಗೆ ಒಂದು ಪತ್ರ ಬರೆದಿರುವುದು ಬಿಟ್ಟರೆ, ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ, ನೀರಾವರಿ ಸಚಿವರು, ಕೇಂದ್ರ ಸಚಿವರು, ಬಿಜೆಪಿ ಸಂಸದರು ಯಾರೊಬ್ಬರೂ ಏನೂ ಪ್ರಯತ್ನ ಮಾಡಿಲ್ಲ.
ಈಗ ಕಾಂಗ್ರೆಸ್ ಪಕ್ಷವನ್ನು ಯಾಕೆ ದೂರುತ್ತೀರಿ? ಕೇಂದ್ರದಲ್ಲಿರುವುದು ಕಾಂಗ್ರೆಸ್ ಪಕ್ಷದ ಸರ್ಕಾರವೇ? ಮನಮೋಹನ್ ಸಿಂಗ್ ಇಲ್ಲವೇ ರಾಹುಲ್ ಗಾಂಧಿ ಪ್ರಧಾನಿಯಾಗಿದ್ದಾರೆಯೇ? ಪ್ರಧಾನಿಯಾಗಿರುವವರು ನರೇಂದ್ರ ಮೋದಿಯವರು. ಅವರನ್ನು ಭೇಟಿಯಾಗಲು ನಿಮಗೇನು ಕಷ್ಟ? ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಮುಖ್ಯಮಂತ್ರಿಗಳು, ಸಚಿವರು ಇಲ್ಲವೇ ಬಿಜೆಪಿ ಸಂಸದರಿಗೆ ಅಂಜಿಕೆಯಾಗುವುದಿದ್ದರೆ ಸರ್ವ ಪಕ್ಷಗಳ ನಿಯೋಗದಲ್ಲಿ ನಾವು ಬಂದು ಮೇಕೆದಾಟು ಯೋಜನೆ ಜಾರಿಗಾಗಿ ಅವರನ್ನು ಒತ್ತಾಯಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.