ಬೆಂಗಳೂರು : ಇಂದಿನಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ . ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೊಮ್ಮಾಯಿ ಅವರಿಗೆ ಇದು ಮೊದಲ ಅಧಿವೇಶನವಾಗಿದೆ .
ಈ ನಡುವೆ ರಾಜ್ಯ ಸರ್ಕಾರಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಮುಟ್ಟಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯೇರಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎತ್ತಿನಗಾಡಿಯನ್ನು ಏರಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಅಧಿಕೃತ ನಿವಾಸದಿಂದ ವಿಧಾನಸೌಧದತ್ತ ತೆರಳಿದ ಸಿದ್ದರಾಮಯ್ಯಗೆ ಎಸ್.ಆರ್.ಪಾಟೀಲ್. ಎಂ.ಬಿ.ಪಾಟೀಲ್ ಮತ್ತು ಪರಿಷತ್ ಸದಸ್ಯ ನಜಿರ್ ಅಹಮದ್ ಸಾಥ್ ನೀಡಿದರು.
ಎತ್ತಿನಗಾಡಿಯ ಮೂಲಕ ಅಧಿವೇಶನಕ್ಕೆ ಬಂದ ಸಿದ್ದರಾಮಯ್ಯ & ಡಿ.ಕೆ. ಶಿವಕುಮಾರ್ pic.twitter.com/sorG9L1gqh
— Janashakthi Media (@janashakthikw) September 13, 2021
ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಹಿಂದಿನ ಸರ್ಕಾರ ಹೆಚ್ಚು ಸಾಲ ಮಾಡಿದೆ ಎಂದು ಹೇಳುತ್ತಾರೆ. ಕಚ್ಚಾ ತೈಲ ಬೆಲೆ ಹೆಚ್ಚಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿಲ್ಲ. ಕೇಂದ್ರ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. 7 ವರ್ಷದಲ್ಲಿ 24 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಬೆಲೆ ಏರಿಕೆ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರ ಜನರಿಂದ ಪ್ರತಿದಿನ ಪಿಕ್ ಪಾಕೆಟ್ ಮಾಡುತ್ತಿದೆ. ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಸರ್ಕಾರಕ್ಕೆ ಬಿಸಿಮುಟ್ಟಿಸಲು ಎತ್ತಿನಗಾಡಿಯಲ್ಲಿ ಹೋರಾಟ ನಡೆಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪ್ರತಿಭಟನಾಕಾರರನ್ನು ತಡೆದ ಪೊಲೀಸರು: ನಾಲ್ಕು ಎತ್ತಿನ ಗಾಡಿ ಸಹಿತ ನೂರಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿ ಪೊಲೀಸರು ತಡೆದು, ಬ್ಯಾರಿಕೆಡ್ ಹಾಕಿ ಬಂದ್ ಮಾಡಿದ್ದಾರೆ. ಜೊತೆಗೆ ಚಾಲುಕ್ಯ ಸರ್ಕಲ್ ಬಳಿ ಎತ್ತಿನ ಗಾಡಿಯನ್ನು ತಡೆದ ಪೋಲಿಸರು ಬ್ಯಾರಿಕೆಡ್ ಹಾಕಿದ್ದಾರೆ.
ಪೊಲೀಸರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ವಿಧಾನಸೌಧದ ಆವರಣಕ್ಕೆ ಎತ್ತಿನಗಾಡಿ ಬಿಟ್ಟರೆ ಏನಾಗುತ್ತೆ? ಆಕಾಶ ಬಿದ್ದು ಹೋಗುತ್ತಾ ಎಂದು ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನಸೌಧದ ಗೇಟ್ ನಂಬರ್ 1ರ ಬಳಿ ಎತ್ತಿನಗಾಡಿ ಹೋಗಲು ಬಿಡಿ, ಇಲ್ಲ ಅಂದ್ರೆ ಮೇಲೆ ಓಡಿಸುತ್ತೇವೆ ಎಂದು ಪೊಲೀಸರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಸಿಎಂ ಆಕ್ರೋಶ :ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎತ್ತಿನಗಾಡಿ ಚಲೋ ನಡೆಯುತ್ತಿದ್ದು, ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ಹೊರ ಹಾಕಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲೂ ಧರಣಿ ಮಾಡಬೇಕಿತ್ತು. ಆಗ ಇರುವ ಮಾಡಿದ ಪ್ರತಿಭಟನೆಗೆ ಅರ್ಥ ಬರುತ್ತಿತ್ತು. ಬೆಲೆ ಏರಿಕೆಯ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತುತ್ತಾರಂತೆ. ಕಾಂಗ್ರೆಸ್ನವರ ಪ್ರಶ್ನೆಗಳಿಗೆ ನಾನು ತಕ್ಕ ಉತ್ತರ ನೀಡುತ್ತೇನೆ ಎಂದು ಸಿಎಂ ಗರಂ ಆಗಿದ್ದಾರೆ.