ಬೆಂಗಳೂರು: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವಿಚಾರವು ರಾಜಕೀಯ ಬಣ್ಣ ಪಡೆಯುತ್ತಿದೆ. ಕಾಂಗ್ರೆಸ್- ಬಿಜೆಪಿ ನಡುವೆ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ದೌರ್ಜನ್ಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಜಾಮೀನಿನ ಮೇಲೆ ಹೊರಗಿರುವ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ನೃತ್ಯ ಮಾಡಿದ ವಿಡಿಯೋ ವೈರಲ್
ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ತಿರುಗೇಟು ನೀಡಿದ್ದು, ಕಾಂಗ್ರೆಸ್ ಕಾರ್ಯಕರ್ತ ಜಾಲತಾಣದಲ್ಲಿ ಈ ಹಿಂದೆ ಯಾವ ಪೋಸ್ಟ್ ಹಾಕಿದ್ದಾನೆ ಎಂಬ ಅರಿವಿಲ್ಲದೆ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಮರ್ಥಿಸುವ ಭರದಲ್ಲಿ ಸೈನಿಕರನ್ನು ಸಿದ್ದರಾಮಯ್ಯ ಅವಮಾನಿಸುತ್ತಿದ್ದಾರೆ. ದೇಶದ್ರೋಹಿ ವ್ಯಕ್ತಿಯನ್ನು ಬೆಂಬಲಿಸುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಬಿಜೆಪಿ ಪಕ್ಷವೂ ಸಹ ಸರಣಿ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಅವರ ಪಾಕಿಸ್ತಾನ ಪ್ರೇಮ ಈ ಹಿಂದೆಯೇ ಪ್ರಕಟವಾಗಿತ್ತು. ಪಾಕಿಸ್ತಾನವನ್ನು ಪ್ರೇಮಿಸುವವ ಸಮಾಜಘಾತುಕ ಸಂಘಟನೆಗಳ ಕೇಸ್ ಹಿಂಪಡೆದಿದ್ದರು. ಈಗ ಶತ್ರುರಾಷ್ಟ್ರ ಪಾಕಿಸ್ತಾನದ ಪರವಾಗಿ ಬರೆದ ವ್ಯಕ್ತಿಯ ವಿರುದ್ಧ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನವರು ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಕೋವಿಡ್ ನಿರ್ವಹಣೆಯ ವಿಫಲತೆಯಿಂದಲೇ ಹರ್ಷವರ್ಧನ್ ರಾಜೀನಾಮೆ: ಡಿ.ಕೆ.ಶಿವಕುಮಾರ್
”ಬಿಜೆಪಿ ಶಾಸಕರ ಕುಮ್ಮಕ್ಕಿನಿಂದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣರ ಮೇಲೆ ಕಾರ್ಕಳ ಪೊಲೀಸರು ಬಿಜೆಪಿ ಮುಖಂಡರ ಸಮ್ಮುಖ ಠಾಣೆಯಲ್ಲಿ ಗಂಭೀರ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಇದು ಖಂಡನೀಯ. ತಪ್ಪಿತಸ್ಥ ಪೊಲೀಸರ ಮೇಲೆ ಕಠಿಣ ಕ್ರಮ ಜರುಗಬೇಕು. ಬಿಜೆಪಿ ಪೊಲೀಸರನ್ನು ಬಳಸಿ ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ಹೊರಟಿದೆ. ಇದನ್ನು ಎಲ್ಲರೂ ಒಂದಾಗಿ ವಿರೋಧಿಸಬೇಕು” ಎಂದು ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಘಟನೆಯ ಹಿನ್ನೆಲೆ
ರಾಧಾಕೃಷ್ಣ ನಾಯಕ್ ಎಂಬಾತ ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಯೋಧರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಯ ಬಗ್ಗೆ ಕೆಲವರು ಇದರ ಬಗ್ಗೆ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಕಾರ್ಕಳ ಟೌನ್ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆದರೆ ರಾಧಾಕೃಷ್ಣ ನಾಯಕ್ ಪೊಲೀಸರು ತನಿಖೆಗೆ ಹಾಜರಾಗುತ್ತಿರಲಿಲ್ಲ ಎನ್ನಲಾಗಿತ್ತು.
ಈ ಬಗ್ಗೆ ಕಾರ್ಕಳ ಟೌನ್ ಎಸ್ ಐ ಮಧು ರಾಧಾಕೃಷ್ಣ ನಾಯಕ್ ಅವರನ್ನು ನೆನ್ನೆ ಠಾಣೆಗೆ ಕರೆಸಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಅವರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನ ಹಿರ್ಗಾನ ನಿವಾಸಿ ರಾಧಾಕೃಷ್ಣ ಎಂಬವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತನ್ನ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಗಳನ್ನು ಹಾಕಿದ್ದರು ಎಂದು ದೂರಲಾಗಿದೆ.
2020 ಆಗಸ್ಟ್ ನಲ್ಲಿ ಇವರ ಫೇಸ್ ಬುಕ್ ನ ಫೇಕ್ ಐಡಿಯ ಮುಖಾಂತರ ಕಿಡಿಗೇಡಿಗಳು ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಇದರ ಬಗ್ಗೆ ರಾಧಾಕೃಷ್ಣ ಅವರೇ ಬೆಂಗಳೂರು ಉತ್ತರ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ 26-8-2020 ರಂದು ದೂರು ನೀಡಿದ್ದರು ಮತ್ತು ಪೊಲೀಸರ ಮನವಿಯ ಮೇರೆಗೆ ಮತ್ತೊಮ್ಮೆ 4-9-2020 ದೂರು ನೀಡಿದ್ದರು.
ಈ ಬಗ್ಗೆ ಪೊಲೀಸ್ ತನಿಖೆ ನಡೆಸಿ ಇವರ ಹೇಳಿಕೆ ಪಡೆಯಲಾಗಿತ್ತು ನಂತರ ಇವರು ಕೆಲಸ ಕಳೆದುಕೊಂಡು ಊರಿಗೆ ಮರಳಿದ್ದು, ಈ ಮಧ್ಯೆ 4.4.2021ರಂದು ಹೃದಯಾಘಾತದಿಂದಾಗಿ ಸ್ಟಂಟ್ ಅಳವಡಿಸಲಾಗಿತ್ತು.
ಕೆಲ ದಿನಗಳ ಹಿಂದೆ ಕಾರ್ಕಳ ನಗರ ಠಾಣೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಸತತ ಮೂರು ದಿನಗಳಲ್ಲಿ ಪೊಲೀಸ್ ಠಾಣೆಗೆ ಹೋದಾಗ ಠಾಣಾಧಿಕಾರಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಗುರುವಾರ ಎಕಾಎಕಿ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿದ ಪರಿಣಾಮ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾರ್ಕಳ ಎಸ್ ಐ ಮಧು, ಆತ ನಮ್ಮ ವಿಚಾರಣೆಗೆ ಸಹಕಾರ ನೀಡಿಲ್ಲ, ಹೀಗಾಗಿ ನಾವು ಗದರಿಸಿದ್ದು ಹೌದು, ಆದರೆ ಹೊಡೆದಿಲ್ಲ. ಈ ಆರೋಪಗಳು ಸತ್ಯಕ್ಕೆ ದೂರವಾದವು ಎಂದಿದ್ದಾರೆ.
ನಮ್ಮ ತನಿಖೆಯ ಹಾದಿಯಲ್ಲಿ ಎಲ್ಲೂ ತಪ್ಪು ಮಾಡಿಲ್ಲ. ನಾವು ಆತನಿಗೆ ಹೊಡೆದಿಲ್ಲ. ಕಾನೂನಾತ್ಮಕವಾಗಿ ನಾವು ಸರಿ ಇದ್ದೇವೆ. ನಾವು ಯಾರ ಪರ ಅಥವಾ ವಿರೋಧವಾಗಿ ಕೆಲಸ ಮಾಡಿಲ್ಲ. ಆತನ ದೇಶದ ಯೋಧರ ಬಗ್ಗೆ ಅವಮಾನಕಾರಿಯಾಗಿ ಪೋಸ್ಟ್ ಹಾಕಿದ್ದ, ಅದಕ್ಕಾಗಿ ತನಿಖೆಗೆ ಕರೆದಿದ್ದೇವೆ ಎಂದು ಎಸ್ ಐ ಮಧು ಸ್ಪಷ್ಟನೆ ನೀಡಿದ್ದಾರೆ.