ರಾಹುಲ್‌ ಗಾಂಧಿ ಇಡಿ ವಿಚಾರಣೆ : ಮುಂದುವರೆದ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ರಾಹುಲ್‌ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಸೇರಿ ಹಲವು ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ಕೂಡ ಹಲವು ನಾಯಕರನ್ನು ಪ್ರತಿಭಟನೆಯ ವೇಳೆ ಬಂಧಿಸಿ ಬಿಡುಗಡೆ ಮಾಡಲಾಗಿತ್ತು.

ರಾಜ್ಯ ನಾಯಕರು ಪೊಲೀಸ್‌ ವಶಕ್ಕೆ : ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಲು ಹೊರಟ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್ ಹಾಗೂ ತಮಿಳುನಾಡಿನ ಸಂಸದರನ್ನು ದೆಹಲಿಯ ನರೇಲಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್ ಕಚೇರಿಗೆ ಹೊರಟ ಈ ನಾಯಕರನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ವಾಗ್ವಾದ ನಡೆಯಿತು ಹಾಗೂ ಪೊಲೀಸರ ಧೋರಣೆಯನ್ನು ಸುರೇಶ್ ಪ್ರಶ್ನಿಸಿದರು. ಪೊಲೀಸರೊಬ್ಬರು ಸುರೇಶ್ ಅವರನ್ನು ಹಿಂಬದಿಯಿಂದ ತಳ್ಳಿದರು. ಬಳಿಕ ಬಸ್ಸಿನಲ್ಲಿ ಕರೆದುಕೊಂಡು ಹೋದರು.

 

ಈಗಾಗಲೇ ಮುಗಿದಿರುವ ಪ್ರಕರಣವನ್ನು ಮತ್ತೆ ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿರುವ ‘ಕರ್ನಾಟಕ ಕಾಂಗ್ರೆಸ್‌’ ಟ್ವಿಟರ್‌ ಮೂಲಕ ಗುಡುಗಿದೆ. ‘ಮುಗಿದಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಬಿಜೆಪಿ, ಈ ದಶಕದ ಅತಿದೊಡ್ಡ ಹಗರಣ ಪಿಎಂ ಕೇರ್ ಫಂಡ್ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ? ಜಾರಿ ನಿರ್ದೇಶನಾಲಯದ ನೋಟಿಸ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಯಾವಾಗ ತಲುಪಲಿದೆ? ಜನರ ಹಣದ ಸರಿಯಾದ ಲೆಕ್ಕ ಯಾವಾಗ ಬಹಿರಂಗ ಪಡಿಸುತ್ತೀರಿ?’ ಎಂದು ಟ್ವೀಟ್‌ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *