ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಸಚಿವರು, ಶಾಸಕರು ಹಾಗೂ ಸಂಸದರು ಸೇರಿದಂತೆ ಹಲವು ನಾಯಕರು ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ನಾನು ಇಬ್ಬರೇ ನಡೆಯಲು ಸಿದ್ಧ: ಡಿ ಕೆ ಶಿವಕುಮಾರ್
ಕೆಲವು ಶಾಸಕರು,ಸಂಸದರು,ಪಕ್ಷದ ಹಿರಿಯ ಮುಂಖಡರು ಸೇರಿದಂತೆ ಒಟ್ಟು 50 ನಾಯಕರನ್ನು ಮೂರು ತಂಡಗಳಂತೆ ಸಭೆಗೆ ಆಹ್ವಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಸಭೆ ಕರೆಯಲಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ 2024ರ ಲೋಕಸಭಾ ಚುನಾವಣೆಯಲ್ಲಿ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಕೂಡ ಕಾಂಗ್ರೆಸ್ ಗುರಿಯಾಗಿದೆ. ಹೀಗಾಗಿ ಇಂದು ರಾಜ್ಯ ನಾಯಕರ ಜೊತೆ ಹೈಕಮಾಂಡ್ ನಾಯಕರು ನಡೆಸುತ್ತಿರುವ ಸಭೆ ಮಹತ್ವದ್ದಾಗಿದೆ.
ಲೋಕಸಭಾ ಚುನಾವಣೆ ಸಿದ್ದತೆ, ಪಕ್ಷದ ಸಂಘಟನೆ ಹಾಗೂ ಇನ್ನಿತರ ವಿಚಾರವಾಗಿ ದೆಹಲಿಯಲ್ಲಿ ವರಿಷ್ಠರ ಜೊತೆಗೆ ಮೂರು ಹಂತದ ಸಭೆ ನಡೆಯಲಿದೆ. ದೆಹಲಿಗೆ ಹೋಗುತ್ತಿದ್ದೇನೆ, ದೆಹಲಿಯಲ್ಲಿ ಪಕ್ಷದ ಕೆಲಸ ಇದೆ, ಸರ್ಕಾರದ ಕೆಲಸ ಇದೆ. ಪಕ್ಷದ ಹಿತದೃಷ್ಟಿಯಿಂದ ಹೋಗುತ್ತಿದ್ದೇವೆ ಎಂದು ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.