ಸಿ.ಎಂ. ಇಬ್ರಾಹಿಂ ರಿಂದ ಜನತಾ ಪರಿವಾರ ಒಗ್ಗೂಡಿಸುವ ಗುರಿ
ಬೆಂಗಳೂರು, ಜ7 : ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದ್ದು, ಹಾಲಿ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಬಿಡುವುದು ಖಚಿತವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಜೆಡಿಎಸ್ ಸೇರಲು ತೀರ್ಮಾನಿಸಿದ್ದೇನೆ. ಅಲ್ಲದೇ ರಾಷ್ಟ್ರಮಟ್ಟದಲ್ಲಿ ಜನತಾ ಪರಿವಾರವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತೇನೆ. ಈ ಸಂಬಂಧ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರೊಂದಿಗೆ ಚರ್ಚಿಸಲಿದ್ದೇನೆ ಎಂದು ಹೇಳಿದ್ದಾರೆ.
ನಾನು ಕಾಂಗ್ರೆಸ್ ಬಿಟ್ಟರೆ ಪರಿಷತ್ ಸ್ಥಾನ ಹೋಗುತ್ತದೆ. ಹೋದರೆ ಹೋಗಲಿ ನನಗೆ ಅಧಿಕಾರಕ್ಕಿಂತ ಜನರ ಹಿತ ಮುಖ್ಯವಾಗಿದೆ. ಇನ್ನು ಸ್ವಾರ್ಥಕ್ಕಾಗಿ ನಾನು ಜೆಡಿಎಸ್ ಪಕ್ಷ ಸೇರುತ್ತಿಲ್ಲ, ಜನತಾ ಪರಿವಾರವನ್ನು ಒಗ್ಗೂಡಿಸುವ ಚಿಂತನೆ ಹೊಂದಿದ್ದು, ಹೀಗಾಗಿ ಜೆಡಿಎಸ್ ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ JDU ಪಕ್ಷಕ್ಕಾಗಿ ಶ್ರಮಿಸುತ್ತಿರುವ ಮಹಿಮಾ ಪಟೇಲ್ ಜೊತೆ ಮಾತನಾಡಿದ್ದೇನೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, RJD ನಾಯಕ ತೇಜಸ್ವಿ ಯಾದವ್ ರವರ ಜೊತೆ ಮಾತನಾಡಿದ್ದೇನೆ. ಸಧ್ಯದಲ್ಲಿ ಭೇಟಿಯಾಗಿ ಜನತಾ ಪರಿವಾರವನ್ನು ಒಗ್ಗೂಡಿಸಿ ಪಕ್ಷವನ್ನು ಬಲಪಡಿಸುವುದಾಗಿ ತಿಳಿಸಿದ್ದಾರೆ.
ಸಿ.ಎಂ. ಇಬ್ರಾಹಿಂ ಪಕ್ಷ ಸೇರುವ ಕುರಿತು ಜೆಡಿಎಸ್ ಯಾವುದೆ ಪ್ರತಿಕ್ರೀಯೆ ನೀಡಿಲ್ಲ. ಹಾಗಾಗಿ ಇಬ್ರಾಹಿಂ ರವರ ಕನಸು, ಜೆಡಿಎಸ್ ಸೇರ್ಪಡೆ ವಿಚಾರ ಏನಾಗಬಹುದು ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಎದ್ದಿದೆ. ನಾನು ಎಲ್ಲಿ ಇರುತ್ತೇನೆ ಅಲ್ಲಿ ಇಬ್ರಾಹಿಂ ಇರ್ತಾನೆ, ಆತ ಕಾಂಗ್ರೆಸ್ ಬಿಡೋಲ್ಲ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಹಿನ್ನಡೆಯಾಗಿದೆ.