ನವದೆಹಲಿ : ಇತ್ತೀಚೆಗೆ ಅಷ್ಟೇ ಫಲಿತಾಂಶ ಹೊರಬಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ ಸೋಲಿನ ವಿಶ್ಲೇಷಣೆಗಾಗಿ ಗುಂಪು-23ರ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗುಲಾಂ ನಬಿ ಆಜಾದ್ ನಿವಾಸದಲ್ಲಿ ಸಭೆ ನಡೆಸಿದರು.
ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರದಲ್ಲಿ ಪಕ್ಷ ಎದುರಿಸಿದ ಮುಖಭಂಗದ ಹಿಂದಿನ ಕಾರಣವನ್ನು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ತುರ್ತು ಎಐಸಿಸಿ ಸಭೆ ಕರೆಯುವಂತೆ ಜಿ-23 ಸದಸ್ಯರು ಒತ್ತಾಯಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ರಚನೆ, ಇತ್ತೀಚಿನ ಚುನಾವಣಾ ಸೋಲಿನ ಹೊಣೆಗಾರಿಕೆ ಮತ್ತು ಸಾಂಸ್ಥಿಕ ಚುನಾವಣೆಗಳನ್ನು ಪೂರ್ಣಗೊಳಿಸುವುದರ ಬಗ್ಗೆ ಚರ್ಚೆ ನಡೆಸಬೇಕಿದೆ.
ಈ ಸಭೆಯಲ್ಲಿ ಚುನಾವಣೆಗಳಲ್ಲಿ ಪಕ್ಷದ ಸತತ ಸೋಲಿನ ಬಗ್ಗೆ ಕಳವಳ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಈ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ನಾಯಕರು ಮುಂದಿನ ಕಾರ್ಯಕಾರಿ ಸಮಿತಿಯಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ. ಕೆಲವು ಮುಖ್ಯಮಂತ್ರಿಗಳು, ಯುವ ಕಾಂಗ್ರೆಸ್ ಮುಖಂಡರು ಕೇವಲ ಗಾಂಧಿ ಕುಟುಂಬದ ಪರವಾಗಿರುವ ಕಾರಣದಿಂದ ತಾವು ಕಾರ್ಯಕಾರಿ ಸಮಿತಿಯಿಂದ ಹೊರಗೆ ಉಳಿಯುವುದಾಗಿ ಹೇಳಿದ್ದಾರೆ. ಯಾವುದೇ ಗಂಭೀರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿಲ್ಲ ಎಂದು ತಿಳಿದು ಬಂದಿದೆ.
ಗುಂಪು 23 ಸಮೂಹದ ಭಾಗವಾಗಿರುವ ಆನಂದ್ ಶರ್ಮಾ ಮಾತನಾಡಿ, ಸಭೆಯಲ್ಲಿ ಕೆಲವರು ಸಮರ್ಥವಾಗಿ ಮಾತನಾಡಿದರೆ, ಇನ್ನೂ ಕೆಲವರು ಸಮರ್ಥವಾಗಿ ಮಾತನಾಡುವವರನ್ನು ತಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ಅವರನ್ನು ವಿರೋಧಿಸುತ್ತಾರೆ. ಇದರಿಂದಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು ಮಾತ್ರವೇ ಈ ಸಭೆಯಲ್ಲಿ ಪಾಲ್ಗೊಳ್ಳಬೇಕು. ಮುಂದಿನ ಕೆಲವೇ ದಿನಗಳಲ್ಲಿ ಗುಂಪು-23 ನಾಯಕರ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಗುಂಪು-23 ತಂಡದಲ್ಲಿರುವ ನಾಯಕರು ಇವರು;
- ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಹರಿಯಾಣ ವಿಧಾನಸಭೆ ವಿರೋಧ ಪಕ್ಷದ ನಾಯಕ.
- ಪಂಜಾಬ್ ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭಟ್ಟಾಲ್
- ಕರ್ನಾಟಕ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯ್ಲಿ
- ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್
- ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್
- ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್
- ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ
- ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹಾಗೂ ಸಂಸತ್ ಸದಸ್ಯ ವಿವೇಕ್ ಟಂಖಾ
ಪಟ್ಟಿಯಲ್ಲಿ ಮಾಜಿ ಕೇಂದ್ರ ಸಚಿವರು, ಸಿಡಬ್ಲ್ಯೂಸಿ ಸದಸ್ಯರು: 9. ಮುಕುಲ್ ವಾಸನಿಕ್, 10. ಜಿತಿನ್ ಪ್ರಸಾದ್, 11. ಆನಂದ್ ಶರ್ಮಾ, 12. ಪಿ ಜೆ ಕುರಿಯನ್, 13. ಅಜಯ್ ಸಿಂಗ್, 14. ರೇಣುಕಾ ಚೌಧರಿ, 15. ಮಿಲಿಂದ್ ದಿಯೋರಾ, 16. ಶಶಿ ತರೂರ್, 17. ಸಂದೀಪ್ ದೀಕ್ಷಿತ್, 18. ರಾಜ್ ಬಬ್ಬರ್, 19. ಅರವಿಂದ್ ಸಿಂಗ್ ಲವ್ಲಿ, 20. ಕೌರ್ ಸಿಂಗ್ ಠಾಕೂರ್, 21. ಕುಲದೀಪ್ ಶರ್ಮಾ, 22. ಯೋಗಾನಂದ್ ಶಾಸ್ತ್ರಿ