ಮತದಾರರ ಮಾಹಿತಿ ಅಕ್ರಮ ಸಂಗ್ರಹ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಪಕ್ಷ ದೂರು

ಬೆಂಗಳೂರು: ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿರುವುದು ಚುನಾವಣೆ ಪ್ರಕ್ರಿಯೆ ಭ್ರಷ್ಟಾಚಾರಗೊಳಿಸುವ ಹುನ್ನಾರವಾಗಿದೆ ಎಂದು ಕಾಂಗ್ರೆಸ್‌ ಪಕ್ಷವು ಆರೋಪಿಸಿದ್ದು,  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್‌ ಪಕ್ಷದ ನಿಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.

ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪ ಬೆಳಕಿಗೆ ಬಂದಿದ್ದು, ಕೇಂದ್ರ ಚುನಾವಣಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್‌ ಪಕ್ಷ ಆಗ್ರಹಿಸಿದೆ. ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿರುವುದು ಚುನಾವಣೆ ಪ್ರಕ್ರಿಯೆ ಭ್ರಷ್ಟಾಚಾರಗೊಳಿಸುವ ಹುನ್ನಾರ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷವು ಸರ್ಕಾರದ ವಿರುದ್ಧ ದೂರು ಸಲ್ಲಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದುವರೆಗೂ ಚುನಾವಣಾ ಅಕ್ರಮದಲ್ಲಿ ಭಾಗಿಯಾದವರನ್ನೂ ಬಂಧನ ಮಾಡಿಲ್ಲ. ನೆಪಕ್ಕೆ ಮಾತ್ರಕ್ಕೆ  ವಶಕ್ಕೆ ಪಡೆದಿದ್ದಾರೆ. ಯಾರೋ ಕೆಲವರನ್ನು ಮಾತ್ರ ಬಂಧಿಸಿದರೆ ಸಾಲದು, ಇದರಲ್ಲಿ ಭಾಗಿಯಾದವರ ಎಲ್ಲರ ಮೇಲೆಯೂ ಎಫ್ ಐಆರ್ ದಾಖಲಿಸಬೇಕು. ಗುರುತಿನ ಚೀಟಿ ಪಡೆದಿರುವವರ ಮೇಲೂ ಪ್ರಕರಣ ಹಾಕಬೇಕು. ಮುಖ್ಯ ನ್ಯಾಯಮೂರ್ತಿಗಳು ಸುಮೊಟೋ ಅಡಿ ಪ್ರಕರಣವನ್ನು ದಾಖಲಿಸಿಕೊಂಡು, ಅವರ ಮಾರ್ಗದರ್ಶನದಲ್ಲೇ ತನಿಖೆಯಾಗಬೇಕು. ಅವರು ಏನು ತಪ್ಪು ಮಾಡಿದ್ದಾರೆ ಗೊತ್ತಾಗಬೇಕು ಎಂದರು.

ಒಂದೆಡೆ ಕಾಂಗ್ರೆಸ್ ನಾಯಕರ ನಿಯೋಗ ದೂರು ಸಲ್ಲಿಸಲು ಒಳಗೆ ತೆರಳಿದರೆ, ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗದ ಎದುರು ಧರಣಿ ನಡೆಸಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ನಿಯೋಗ ಭೇಟಿಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಿತ್ತು. ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿರುವ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗದೊಂದಿಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಶಾಸಕರಾದ ಸೌಮ್ಯ ರೆಡ್ಡಿ, ರಿಜ್ವಾನ್ ಹರ್ಷದ್ ಸಹ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *