‘ಇದು ಆರಂಭ ಮಾತ್ರ’ | ದೆಹಲಿ ರೈತ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ

ನವದೆಹಲಿ: ದೆಹಲಿಗೆ ರ‍್ಯಾಲಿ ಹೊರಟಿರುವ ಪ್ರತಿಭಟನಾ ನಿರತ ರೈತರನ್ನು ತಡೆದ ಕೇಂದ್ರ ಮತ್ತು ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳನ್ನು ಕಾಂಗ್ರೆಸ್ ಮಂಗಳವಾರ ಖಂಡಿಸಿದ್ದು, ಮುಂದಿನ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವಿವಿಧ ಬೆಳೆಗಳಿಗೆ ಎಂಎಸ್‌ಪಿ ಖಾತರಿಪಡಿಸುವ ಕಾನೂನಿನ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ರೈತರ ಆಂದೋಲನವನ್ನು ಕಾಂಗ್ರೆಸ್‌ ಬೆಂಬಲಿಸಿದ್ದು, ‘ಇದು ಕೇವಲ ಆರಂಭ ಮಾತ್ರ’ ಎಂದು ಹೇಳಿದೆ.ರೈತ ಹೋರಾಟ

ರೈತ ಹೋರಾಟದ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ರೈತ ಬಂಧುಗಳೇ, ಇಂದು ಐತಿಹಾಸಿಕ ದಿನ! ಸ್ವಾಮಿನಾಥನ್ ಆಯೋಗದ ಪ್ರಕಾರ ಬೆಳೆಗಳ ಮೇಲೆ ಪ್ರತಿ ರೈತರಿಗೆ ಎಂಎಸ್‌ಪಿ ಕಾನೂನುಬದ್ಧ ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕ್ರಮವು 15 ಕೋಟಿ ರೈತ ಕುಟುಂಬಗಳ ಏಳಿಗೆಯನ್ನು ಖಾತರಿಪಡಿಸುವ ಮೂಲಕ ಅವರ ಜೀವನವನ್ನು ಬದಲಾಯಿಸುತ್ತದೆ. ನ್ಯಾಯದ ಹಾದಿಯಲ್ಲಿ ಕಾಂಗ್ರೆಸ್ ಮೊದಲ ಗ್ಯಾರಂಟಿ ಇದು” ಎಂದು ಟ್ವೀಟ್ ಮಾಡಿದ್ದಾರೆ.ರೈತ ಹೋರಾಟ

ಇದನ್ನೂ ಓದಿ:ಲೋಕಸಭೆ | 5 ವರ್ಷಗಳಲ್ಲಿ ಒಂದೇ ಒಂದು ಶಬ್ಧ ಮಾತಾಡದ ರಾಜ್ಯದ ನಾಲ್ವರು ಬಿಜೆಪಿ ಸಂಸದರು

10 ವರ್ಷಗಳಿಂದ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಮೋದಿ ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. “ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ (ಲೋಕಸಭಾ ಚುನಾವಣೆಯ ನಂತರ), ರೈತರ ಹಿತದೃಷ್ಟಿಯಿಂದ ಎಂಎಸ್‌ಪಿಗೆ ಕಾನೂನು ಖಾತರಿ ನೀಡುತ್ತದೆ. ಇದು ನಮ್ಮ ಮೊದಲ ಭರವಸೆ” ಎಂದು ಛತ್ತೀಸ್‌ಗಢದ ಅಂಬಿಕಾಪುರ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ `ಭಾರತ್ ಜೋಡೋ ನ್ಯಾಯ್ ಯಾತ್ರೆ’ ಸಂದರ್ಭದಲ್ಲಿ ಖರ್ಗೆ ಹೇಳಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಮಾತನಾಡಿ, ರೈತರ ಆಂದೋಲನವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಹೇಳಿದ್ದು, “ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಹಾಕಿ ದೆಹಲಿಯನ್ನು ‘ಪೊಲೀಸ್ ಕಂಟೋನ್ಮೆಂಟ್’ ಆಗಿ ಪರಿವರ್ತಿಸುವ ಮೂಲಕ ‘ಸರ್ವಾಧಿಕಾರಿ’ ನಡವಳಿಕೆಯನ್ನು ಯಾಕೆ ಅನುಸರಿಸುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ. ದೆಹಲಿ ಗಡಿಗಳ ಬ್ಯಾರಿಕೇಡಿಂಗ್ ಮತ್ತು ಕೋಟೆಯನ್ನು ಉಲ್ಲೇಖಿಸಿದ ಅವರು, ರೈತರ ಹೋರಾಟವನ್ನು ಕೇಂದ್ರ ಸರ್ಕಾರವು ಯಾವುದೋ ಶತ್ರು ರಾಷ್ಟ್ರದ ದಾಳಿ ಎಂದು ಪರಿಗಣಿಸುತ್ತದೆಯೇ ಎಂದು ಕೇಳಿದ್ದಾರೆ.

ಇದನ್ನೂ ಓದಿ:ಹಾಸನ | ಕೆಪಿಆರ್‌ಎಸ್ ನೇತೃತ್ವದಲ್ಲಿ ಬಗರ್ ಹುಕುಂ ಸಾಗುವಳಿ ಭೂಮಿಗಾಗಿ ಹೋರಾಟ

ಎರಡು ವರ್ಷಗಳ ಹಿಂದೆ ರೈತರಿಗೆ ಕೇಂದ್ರ ಸರ್ಕಾರ ನೀಡಿದ್ದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಸಾಲ ಮನ್ನಾ ಕುರಿತ ಕಾನೂನು ಖಾತರಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಂದೋಲನದ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದಾರೆ.

ಈ ಹೋರಾಟದಲ್ಲಿ ಹರ್ಯಾಣ ಮತ್ತು ಪಂಜಾಬ್‌ನ ರೈತರು ಮಾತ್ರ ಭಾಗವಹಿಸುತ್ತಿರುವುದರಿಂದ ಇದು “ಆರಂಭ” ಎಂದು ಎಚ್ಚರಿಸಿದ ಸುರ್ಜೆವಾಲಾ ಎಚ್ಚರಿಸಿದ್ದಾರೆ. “ಈ ಹೋರಾಟದಲ್ಲಿ ಶೀಘ್ರದಲ್ಲೇ ದೇಶದಾದ್ಯಂತದ ರೈತರು ಪಾಲ್ಗೊಳ್ಳಲಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ನೇರವಾಗಿ ಮಾತನಾಡಿ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಏಕೈಕ ಬೇಡಿಕೆಯಾಗಿದೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಹೋರಾಟ ಮಾಡುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಷ್ಟ್ರ ರಾಜಧಾನಿಗೆ ಬರುವ ಹಕ್ಕು ಮತ್ತು ಸ್ವಾತಂತ್ರ್ಯ ರೈತರಿಗೆ ಇಲ್ಲವೇ. ರೈತರು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ನ್ಯಾಯ ಕೇಳಲು ಪ್ರಧಾನಿ ಮತ್ತು ಸರ್ಕಾರದ ಬಳಿಗೆ ಹೋಗದಿದ್ದರೆ ಎಲ್ಲಿಗೆ ಹೋಗಬೇಕು? ಸರ್ಕಾರ ಏನು ಹೆದರುತ್ತಿದೆ? ಸರ್ಕಾರದ ಮೇಲೆ ಶತ್ರುಗಳ ದಾಳಿ ನಡೆಯುತ್ತಿದೆಯೇ?” ಎಂದು ಸುರ್ಜೆವಾಲಾ ಕೇಳಿದ್ದಾರೆ.

ಇದನ್ನೂ ಓದಿ:ದೆಹಲಿ ರೈತ ಹೋರಾಟ | ಡ್ರೋನ್ ಮೂಲಕ ಅಶ್ರುವಾಯು ಸಿಡಿಸುತ್ತಿರುವ ಸರ್ಕಾರ

ಬೆಳೆಗಳಿಗೆ ಎಂಎಸ್‌ಪಿಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಕರೆ ಮೇರೆಗೆ ಸಾವಿರಾರು ರೈತರು ಮಂಗಳವಾರ ನೆರೆಯ ರಾಜ್ಯಗಳಿಂದ ದೆಹಲಿಗೆ ತೆರಳುತ್ತಿದ್ದಾರೆ.

“ಮುಳ್ಳುತಂತಿ, ಡ್ರೋನ್‌ಗಳು, ಮೊಳೆಗಳು ಮತ್ತು ಬಂದೂಕುಗಳಿಂದ ಅಶ್ರುವಾಯು… ಎಲ್ಲವನ್ನೂ ಜೋಡಿಸಲಾಗಿದೆ. ಸರ್ವಾಧಿಕಾರಿ ಮೋದಿ ಸರ್ಕಾರವು ರೈತರ ಧ್ವನಿಯನ್ನು ತಡೆಯಲು ಪ್ರಯತ್ನಿಸುತ್ತಿದೆ. ಆಂದೋಲಂಜೀವಿ ಮತ್ತು ಪರಾವಲಂಬಿ ಎಂದು ಕರೆಯುವ ಮೂಲಕ ರೈತನನ್ನು ಅವಮಾನಗೊಳಿಸಲಾಯಿತು. ಹೀಗಾಗಿ 750 ರೈತರು ಪ್ರಾಣ ಕಳೆದುಕೊಂಡರು ಎಂಬುದನ್ನು ನೆನಪಿಸಿಕೊಳ್ಳಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ, ರೈತರಿಗೆ ನ್ಯಾಯಕ್ಕಾಗಿ ಕಾಂಗ್ರೆಸ್ ಧ್ವನಿ ಎತ್ತಲಿದೆ. ನಾವು ಹೆದರುವುದಿಲ್ಲ, ತಲೆಬಾಗುವುದಿಲ್ಲ ಎಂದು ಖರ್ಗೆ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಿಡಿಯೊ ನೋಡಿ: ಧರೆ ಬಗೆದು ನೀರಿನ ದಾಹ ತೀರಿಸುವ ಗೌರಿ Janashakthi Media

Donate Janashakthi Media

Leave a Reply

Your email address will not be published. Required fields are marked *