ನವದೆಹಲಿ: ರಾಜ್ಯದಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಮಸ್ಕಿ ಕ್ಷೇತ್ರಕ್ಕೆ ಬಿಜೆಪಿ ತೊರೆದು ಪಕ್ಷ ಸೇರಿದ್ದ ಬಸವನಗೌಡ ತುರವಿಹಾಳ ಅವರು ಅಭ್ಯರ್ಥಿ.
ಕರ್ನಾಟಕ ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪಗೌಡ ಪಾಟೀಲ ಅವರ ವಿರುದ್ಧ ಬಿಜೆಪಿ ಪಕ್ಷದಿಂದ ಸ್ಫರ್ಧಿಸಿದ್ದ ಬಸವನಗೌಡ ಕೆಲವೇ ಮತಗಳ ಅಂತರದಲ್ಲಿ ಸೋತಿದ್ದರು.
ಶಾಸಕರಾಗಿದ್ದ ದಿವಂಗತ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರನ್ನು ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಘೋಷಿಸಲಾಗಿದೆ.
ಸಿಂಧಗಿ ಕ್ಷೇತ್ರದ ಉಪಚುನಾವಣೆ ಅಧಿಕೃತವಾಗಿ ದಿನಾಂಕ ಘೋಷಣೆಯಾಗಿಲ್ಲ. ಕಾಂಗ್ರೆಸ್ ಸಿಂದಗಿ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಿಸಿದೆ. ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿಗೆ ಟಿಕೆಟ್ ನೀಡಲಾಗಿದೆ.
ಪಕ್ಷದ ಉಮೇದುವಾರಿಕೆ ಘೋಷಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಏಪ್ರಿಲ್ 17ರಂದು ಉಪಚುನಾವಣೆ ನಡೆಯಲಿದೆ.