ಕಾಂಗ್ರೆಸ್‌ ಅಧಿಕಾರಕ್ಕೆ ಬರೋದಿಲ್ಲ, ಆಗಲೇ ಜಾತಿ ಆಧಾರದಲ್ಲಿ ಕುರ್ಚಿಗಾಗಿ ಕಿತ್ತಾಟ: ಆರ್.‌ ಅಶೋಕ್‌

ಹಾಸನ: ಮುಖ್ಯಮಂತ್ರಿ ಕುರ್ಚಿಗಾಗಿಯೇ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಜಗಳದಲ್ಲಿ ಮುಳುಗಿರುವ ಪಕ್ಷವು ಮುಂದಿನ 20 ವರ್ಷಗಳವರೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಪಕ್ಷದಲ್ಲಿ ಸಮನ್ವಯತೆ ಇಲ್ಲ, ಪಕ್ಷದ ರೈಲು ಇನ್ನೂ ಟ್ರ್ಯಾಕ್ ಗೆ ಇಳಿದಿಲ್ಲ. ಕೇಂದ್ರದಲ್ಲೂ ಸಹ ಸಮರ್ಥ ವಿರೋಧ ಪಕ್ಷದ ನಾಯಕರು ಇಲ್ಲದೆ ತಬ್ಬಿಬ್ಬಾಗಿದೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ನಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಜಾತಿ ರಾಜಕೀಯದಲ್ಲಿ ತೊಡಗಿರುವ ಪಕ್ಷದಲ್ಲಿ ಸಂವಿಧಾನ ಬದಲಾವಣೆ ಮೂಲಕ ಜಾತಿಗೊಂದರಂತೆ ಸಿಎಂ ಕುರ್ಚಿಯನ್ನು ಸೃಷ್ಟಿ ಮಾಡಬೇಕು ಅಷ್ಟೇ… ಅದು ಸಹ ಕಷ್ಟ ಸಾಧ್ಯ ಆದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸುಳ್ಳು ಎಂದು ಹೇಳಿದರು.

ಇದನ್ನು ಓದಿ: ಸಿಎಂ ಖುರ್ಚಿಯ ಮೇಲೆ ಎಲ್ಲರ ಕಣ್ಣು?!

ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದರು. ಕರ್ನಾಟಕ ಕಾಂಗ್ರೆಸ್ ನಲ್ಲಿ ಬಂಡಾಯ ಏಳುವ ಸ್ಥಿತಿ ನಿರ್ಮಾಣವಾಗಿದೆ. ಹಲವು ಕಾಂಗ್ರೆಸ್ಸಿಗರು ಚುನಾವಣೆ ಒಂದು ವರ್ಷ ಇದ್ದಹಾಗೆ ಬಿಜೆಪಿಗೆ ಬರಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 15 ಮಂದಿಯನ್ನು ನಾವು ಕರೆದುಕೊಂಡು ಬಂದಿದ್ದೇವೆ. ಈ ಮೂಲಕ ನಮ್ಮ ಶಕ್ತಿಪ್ರದರ್ಶನ ಮಾಡಿದ್ದು ಅವರು ಬಿಜೆಪಿಯಿಂದ ಎಷ್ಟುಮಂದಿ ಕರೆದುಕೊಂಡು ಹೋಗುತ್ತಾರೆ ಕಾದು ನೋಡುವ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್‌ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರುವ ಸರಕಾರ ಮುಂದಿನ ಮೂರನೇ ಅಲೆಯನ್ನು ಸಹ ಅವರ ನೇತೃತ್ವದಲ್ಲಿಯೇ ನಿರ್ವಹಣೆ ಮಾಡಲಾಗುವುದು ಹಾಗೂ 2 ವರ್ಷದವರೆಗೆ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಡಿಸೆಂಬರ್ ಒಳಗೆ ರಾಜ್ಯದ ಎಲ್ಲಾ ಜನರಿಗೆ ಎರಡನೇ ಡೋಸ್ ಲಸಿಕೆ ಹಾಕಲು ತಯಾರಿ ಮಾಡುತ್ತಿದ್ದೇವೆ. ಮೂರನೇ ಅಲೆ ತಡೆಗಟ್ಟಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದು ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *