ಮೈಸೂರು : ಸಂಸತ್ ಭವನದಲ್ಲಿ ನಡೆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಂತುಕರಿಗೆ ಪಾಸ್ ನೀಡಿದ ಆರೋಪದ ಮೇರೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದು, ಸಂಸದರ ಪದಚ್ಯುತಿಗೆ ಆಗ್ರಹಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಕಚೇರಿ ಎದುರು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆದಿದ್ದು, ಸಂಸದ ಪ್ರತಾಪಸಿಂಹ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆಗೆ ಪ್ರವೇಶಿಸಿ ಅಶ್ರುವಾಯು ಎಸೆದ ಅಪರಿಚಿತರು; ಮೈಸೂರು ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಪಾಸ್ ಪಡೆದಿದ್ದ ಆರೋಪಿಗಳು
ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಪ್ರತಾಪ್ ಸಿಂಹರವರೇ ನೇರ ಹೊಣೆ ಎಂದು ಘೋಷಣೆ ಕೂಗಿದರು. ಅಲ್ಲದೆ ಕೂಡಲೇ ಸಂಸದ ಪ್ರತಾಪ್ ಸಿಂಹ ಅವರನ್ನು ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಂಸದರ ಕಚೇರಿಯ ಕಾಂಪೌಡ್ ಗೋಡೆ ಏರಿ ಒಳಗೆ ನುಗ್ಗಲು ಯತ್ನಿಸಿದರಾದರೂ ಪೊಲೀಸರು ಅವರನ್ನು ತಡೆದರು. , ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು.
ಸಂಸತ್ ಒಳಗೆ ನುಗ್ಗಿರುವ ದುಷ್ಕರ್ಮಿಗಳು ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದಾರೆ. ಹಾಗಾಗಿ ಪ್ರತಾಪ್ ಸಿಂಹಗೆ ದುಷ್ಕರ್ಮಿಗಳ ಪರಿಚಯ ಇದ್ದೇ ಇರುತ್ತೆ. ಈ ಘಟನೆ ಬೇರೆ ಯಾರಾದರೂ ಮಾಡಿದರೆ ಪ್ರತಾಪ್ ಸಿಂಹ ವೀರಾವೇಷ ತಾಳುತ್ತಿದ್ದರು. ಕೂಡಲೇ ಪ್ರತಾಪ್ ಸಿಂಹಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಅವರ ವಿರುದ್ಧವೂ ತನಿಖೆಯಾಗಬೇಕು ಎಂದು ಪ್ರತಿಭಟನೆಕಾರರು ಆಕ್ರೋಶ ಹೊರಹಾಕಿದ್ದಾರೆ.
ವಿಡಿಯೊ ನೋಡಿ: ಲೋಕಸಭೆಗೆ ನುಗ್ಗಿದ ಇಬ್ಬರು ಅಪರಿಚಿತರು! ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದ ಆರೋಪ #ParliamentAttack