ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ವಿರುದ್ಧ ನಿರ್ಣಾಯಕ ಗೆಲುವಿಗೆ KPRS ಅಭಿನಂದನೆ

ಬೆಂಗಳೂರು: ಬಲವಂತ ಹಾಗೂ ಅನ್ಯಾಯದ ಕೆಐಎಡಿಬಿ ಭೂ ಸ್ವಾಧೀನದ ವಿರುದ್ಧ ಅಪಪ್ರಚಾರ, ದೌರ್ಜನ್ಯ, ಪೊಲೀಸ್ ದಬ್ಬಾಳಿಕೆ, ಸುಳ್ಳು ಮೊಕದ್ದಮೆ ಮುಂತಾದ ಪ್ರಭುತ್ವ ದಮನಕ್ಕೆ ಎದೆಗುಂದದೆ ಕಳೆದ 1198 ದಿನಗಳ ಹೋರಾಟ ನಡೆಸಿ ಸಂಪೂರ್ಣ ಜಯಗಳಿಸಿರುವ ಚನ್ನರಾಯಪಟ್ಟಣ ಹೋಬಳಿ ರೈತರನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಹಾರ್ಧಿಕವಾಗಿ ಅಭಿನಂದಿಸುತ್ತದೆ ಎಂದು ಅಧ್ಯಕ್ಷ ಯು ಬಸವರಾಜ ಹೇಳಿದ್ದಾರೆ.

ಭೂ ಸ್ವಾಧೀನದ ಹೆಸರಿನಲ್ಲಿ ಭೂ ಕಬಳಿಕೆ ನಡೆಸುತ್ತಿರುವ ಕುಖ್ಯಾತಿಗೆ ಒಳಗಾಗಿರುವ ಕೆಐಎಡಿಬಿ ಯು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಅಭಿಪ್ರಾಯಕ್ಕೆ ಅವಕಾಶವೇ ಇಲ್ಲದಂತೆ ಸರ್ವಾಧಿಕಾರಿ ಕ್ರಮವನ್ನೇ ಅನುಸರಿಸುತ್ತಿದೆ ಎಂದರು. ಬಲವಂತ

ಬಲವಂತ ಹಾಗೂ ಅನ್ಯಾಯದ ಕ್ರಮಗಳನ್ನು ತನ್ನ ಕಾನೂನಿನಲ್ಲಿ ಅಡಕ ಮಾಡಿಕೊಂಡಿದೆ. ಇಂತಹ ರೈತ ವಿರೋಧಿ ಬಲವಂತದ ಹಾಗೂ ಅನ್ಯಾಯದ ವಿರುದ್ಧ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ಹೋರಾಡಲು ನಿರ್ಧರಿಸಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಚನ್ನರಾಯಪಟ್ಟಣ ಹೆಸರಿನಲ್ಲಿ ಸಂಘಟಿತಗೊಂಡರು. ಬಲವಂತ

ಇದನ್ನೂ ಓದಿ: ಒಳಮೀಸಲಾತಿ: ಆಗಸ್ಟ್‌ 1 ರಂದು ಅರೆಬೆತ್ತಲೆ ಪ್ರತಿಭಟನೆ – ಎ. ನಾರಾಯಣಸ್ವಾಮಿ

ಕರ್ನಾಟಕ ಪ್ರಾಂತ ರೈತ ಸಂಘ (KPRS) ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಯು ಕಾಂ.ಚಂದ್ರ ತೇಜಸ್ವಿ ಹಾಗೂ ಕಾಂ.ಪ್ರಭಾ ಎನ್ ಬೆಳವಂಗಲ ರವರ ನೇತೃತ್ವದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯು ಕ್ರೀಯಾಶೀಲವಾಗಿಡಲು ಮತ್ತು ಭಾದಿತ ರೈತರ ಒಗ್ಗಟ್ಟು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಈ ಹೋರಾಟದ ಆರಂಭದಿಂದ ನಿಧನ ಹೊಂದುವವರೆಗೂ ನೇತೃತ್ವ ನೀಡುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘ(KPRS) ರಾಜ್ಯ ಅಧ್ಯಕ್ಷರಾಗಿದ್ದ ಕಾಂ.ಜಿಸಿ ಬಯ್ಯಾರೆಡ್ಡಿ ರವರು ಗಟ್ಟಿಯಾದ ತಳಪಾಯ ನಿರ್ಮಿಸಿ ,ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹಕ್ಕೊತ್ತಾಯಗಳನ್ನು ಸರ್ಕಾರದ ಮಟ್ಟದಲ್ಲಿ ಬಲವಾಗಿ ಪ್ರತಿಪಾದಿಸುತ್ತಿದ್ದರು.

ಇವರ ಅಕಾಲ ಮರಣದಿಂದಾಗಿ ಉಂಟಾದ ನಾಯಕತ್ವದ ಕೊರತೆಯನ್ನು ಐಕ್ಯ ಹೋರಾಟವಾಗಿ ಮರು ಹುಟ್ಟು ಪಡೆದು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳ ಕ್ರಿಯಾಶೀಲ ಹಾಗೂ ಸಮರ ಶೀಲ ಬೆಂಬಲದಿಂದಾಗಿ ಭೂ ಸ್ವಾಧೀನ ವನ್ನು ಸಂಪೂರ್ಣ ವಾಗಿ ರದ್ದುಪಡಿಸಿಕೊಳ್ಳುವ ಮಹಾನ್ ವಿಜಯ ಪಡೆಯಲು ಸಾಧ್ಯವಾಗಿದೆ ಅದಕ್ಕಾಗಿ ಈ ಐತಿಹಾಸಿಕ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿ ಬೆಂಬಲಿಸಿದ ಎಲ್ಲರನ್ನೂ ಕರ್ನಾಟಕ ಪ್ರಾಂತ ರೈತ ಸಂಘ (KPRS)
ಕರ್ನಾಟಕ ರಾಜ್ಯ ಸಮಿತಿ ಅಭಿನಂದಿಸುತ್ತದೆ ಎಂದರು.

ಚನ್ನರಾಯಪಟ್ಟಣ ರೈತರ ಈ ಹೋರಾಟ ಗಳಿಸಿರುವ ಸಂಪೂರ್ಣ ವಿಜಯವು ಐತಿಹಾಸಿಕ ಗೆಲುವಿನ ಹೋರಾಟ ವಾಗಿದೆ. ಇಡೀ ರಾಜ್ಯ ಹಾಗೂ ದೇಶದ ಕಾರ್ಪೊರೇಟ್ ಭೂ ಕಬಳಿಕೆ ವಿರುದ್ಧ ಹೋರಾಡುತ್ತಿರುವ ಎಲ್ಲಾ ರೈತರಿಗೆ ಬಹಳ ದೊಡ್ಡ ಆತ್ಮ ವಿಶ್ವಾಸ ಹಾಗೂ ಸ್ಪೂರ್ತಿ ಉಂಟು ಮಾಡಿದೆ. ರಾಜ್ಯದ ರೈತ ಚಳವಳಿ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯುವ ಹೋರಾಟವಾಗಿದೆ ಎಂದರು.

385 ದಿನಗಳ ಕಾಲ ನಡೆದ ಐತಿಹಾಸಿಕ ದೆಹಲಿ ರೈತರ ಹೋರಾಟದ ಸ್ಪೂರ್ತಿ ಪಡೆದಿದ್ದ ಈ ಹೋರಾಟದ ಇತ್ತೀಚಿನ ನಾಡ ಉಳಿಸಿ ಸಮಾವೇಶ ಸೇರಿದಂತೆ ವಿವಿಧ ಹಂತಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆ ಎಂ) ದ ಡಾ.ಅಶೋಕ್ ಧವಳೆ, ಕೃಷ್ಣಪ್ರಸಾದ್, ಡಾ.ವಿಜುಕೃಷ್ಣನ್ ,ರಾಕೇಶ್ ಟಿಕಾಯತ್, ಡಾ.ದರ್ಶನ್ ಪಾಲ್ , ಡಾ.ಸುನೀಲನ್ ,ಯುಧವೀರ್ ಸಿಂಗ್ ಮೊದಲಾದವರು ಭಾಗವಹಿಸಿದ್ದರು. ಈ ಎಲ್ಲಾ ರಾಷ್ಟ್ರೀಯ ನಾಯಕರ ಭಾಗವಹಿಸುವಿಕೆಯಿಂದಾಗಿ ಈ ಹೋರಾಟವು ದೇಶ ಮಟ್ಟದಲ್ಲಿ ಗಮನ ಸೆಳೆಯುವಂತಾಯಿತು.

ಚನ್ನರಾಯಪಟ್ಟಣ ರೈತರ ನ್ಯಾಯಬದ್ಧ ಹಾಗೂ ಕಾನೂನು ಬದ್ದ ಹಕ್ಕೊತ್ತಾಯಗಳನ್ನು ಈಡೇರಿಸಲು ಮೀನಮೇಷ ಎಣಿಸುತ್ತಿದ್ದ ಸಿದ್ದರಾಮಯ್ಯ ರವರ ನೇತೃತ್ವದ ರಾಜ್ಯ ಸರ್ಕಾರ ಕೊನೆಗೂ ಐಕ್ಯ ಹೋರಾಟದ ಒತ್ತಡಕ್ಕೆ ಮಣಿದು ಭೂ ಸ್ವಾಧೀನ ವನ್ನು ಸಂಪೂರ್ಣವಾಗಿ ರದ್ದುಪಡಿಸುವ ಘೋಷಣೆ ಮಾಡಿರುವುದು ಪಟ್ಟು ಬಿಡದ ಹೋರಾಟ ಅಂತಿಮವಾಗಿ ಜಯಗಳಿಸುತ್ತದೆ ಎಂಬ ವಿಶ್ವಾಸವನ್ನು ವೃದ್ದಿಸಿದೆ.

ಈ ಕೂಡಲೇ ಈ ರೈತರ ಮೇಲೆ ಹಾಕಿರುವ ಎಲ್ಲಾ ಸುಳ್ಳು ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು ಹಾಗೂ ಈ ಹೋರಾಟದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಅಪಘಾತ ದಿಂದ ನಿಧನರಾದ ಚನ್ನರಾಯಪಟ್ಟಣ ಹೋಬಳಿಯ ಶ್ರೀ ಅಂಜನಪ್ಪ ಹಾಗೂ ಹೃದಯಾಘಾತದಿಂದ ಮರಣವನ್ನಪ್ಪಿರುವ ಗುಂಡ್ಲುಪೇಟೆ ತಾಲ್ಲೂಕಿನ ಶ್ರೀ ಈಶ್ವರಪ್ಪ ರವರ ಕುಟುಂಬಕ್ಕೆ ಸಾಂತ್ವನ ಹಾಗೂ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: ಚನ್ನರಾಯಪಟ್ಟಣ| ಗೆದ್ದ ಅನ್ನದಾತ, ಮಣಿದ ಕಾರ್ಪೊರೇಟ್ ಧಣಿ! Janashakthi Media

Donate Janashakthi Media

Leave a Reply

Your email address will not be published. Required fields are marked *