ನವದೆಹಲಿ: ಅಸ್ಸಾಂನ ದರ್ರಾಂಗ್ ಜಿಲ್ಲೆಯ ಧೋಲ್ಪುರ್-ಗೊರುಖುತಿ ಪ್ರದೇಶದಲ್ಲಿ ಪೊಲೀಸ್ ಪಾಶವೀ ಕೃತ್ಯಗಳನ್ನು ನಡೆಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಇದು ರಾಜ್ಯ-ಪ್ರಾಯೋಜಿತ ಪಾಶವೀತನ ಎಂದು ಅದು ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ಇದನ್ನು ಓದಿ: ಪೊಲೀಸ್ ಗುಂಡಿಗೆ ಬಲಿಯಾದ ವ್ಯಕ್ತಿಯ ಮೇಲೆ ಕ್ರೂರ ದಾಳಿ ಮಾಡಿದ ಛಾಯಾಗ್ರಾಹಕ ಬಂಧನ
ಪೊಲೀಸರ ನೇರ ಗೋಲೀಬಾರಿನಲ್ಲಿ ಇಬ್ಬರು ವ್ಯಕ್ತಿಗಳ ಹತ್ಯೆಯಾಗಿದೆ, ಹಲವರು ಗಾಯಗೊಂಡಿದ್ದಾರೆ. ‘ಶಂಕಿತ ಕಾನೂನುಬಾಹಿರ ವಲಸೆಗಾರ’ರನ್ನು ಸರಕಾರೀ ಭೂಮಿಯಿಂದ ತೆರವುಗೊಳಿಸುವ ಹೆಸರಿನಲ್ಲಿ ಅಸ್ಸಾಂ ಸರಕಾರ ಭಾರತದ ನಾಗರಿಕರ ಮೇಲೆ, ದಶಕಗಳಿಂದ ಆ ನೆಲದಲ್ಲಿ ಉಳುಮೆ ಮಾಡುತ್ತಿದ್ದ ಬಡ ರೈತರ ಮೇಲೆ ಹಿಂಸಾಚಾರವನ್ನು ಹರಿಯಬಿಟ್ಟಿದೆ. ಈ ಇಡೀ ಕಾರ್ಯಕ್ರಮವನ್ನು ಕೋಮುವಾದಿ ದೃಷ್ಟಿಯಿಂದಲೇ ರೂಪಿಸಲಾಗಿದೆ, ಸಂಪೂರ್ಣವಾಗಿ ಸ್ಥಳೀಯ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧವೇ ಗುರಿಯಿಡಲಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಇದು ಭಾರತದ ಎಲ್ಲ ನಾಗರಿಕರಿಗೆ ಸಮಾನತೆ ಮತ್ತು ಭದ್ರತೆಯ ಸಂವಿಧಾನಿಕ ಖಾತ್ರಿಯ ಮೇಲೆ ನಡೆಸಿರುವ ನೇರ ಪ್ರಹಾರ ಎಂದು ವರ್ಣಿಸಿದೆ.
ಕ್ಯಾಮರಾದಲ್ಲಿ ಸೆರೆಯಾಗಿರುವ ರೈತರ ಮೇಲೆ ಭೀಕರ ಪಾಶವೀ ಹಲ್ಲೆಗಳಲ್ಲಿ ತೊಡಗಿದ್ದ ಪೋಲಿಸ್ ಸಿಬ್ಬಂದಿಯ ವಿರುದ್ದ ತಕ್ಷಣವೇ ಕ್ರಮಕೈಗೊಳ್ಳಬೇಕಾಗಿದೆ. ಗುವಾಹಾಟಿ ಹೈಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರ ಅಡಿಯಲ್ಲಿ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು, ಎಲ್ಲ ತೆರವು ಕ್ರಮಗಳನ್ನೂ ನಿಲ್ಲಿಸಬೇಕು, ಸಾಯಿಸಲ್ಪಟ್ಟವರು ಮತ್ತು ಗಾಯಗೊಂಡವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ), ಅಸ್ಸಾಂನ ಬಿಜೆಪಿ ಸರಕಾರದ ವಿಷಕಾರೀ ಕೋಮುವಾದಿ ದ್ವೇಷ ರಾಜಕೀಯವನ್ನು ಬಯಲಿಗೆಳೆಯುವ ಮತ್ತು ಅದನ್ನು ಎದುರಿಸಿ ಹೋರಾಡುವ ಅಸ್ಸಾಂನ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳ ಪ್ರಯತ್ನಗಳಿಗೆ ಬೆಂಬಲ ವ್ಯಕ್ತಪಡಿಸಿದೆ.