ತ್ರಿಪುರಾದಲ್ಲಿ ಮತ್ತೊಂದು  ಮಾರಣಾಂತಿಕ ಹಲ್ಲೆ- ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

“ರಾಜ್ಯದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು”

ನವದೆಹಲಿ: ನವೆಂಬರ್ 30ರಂದು ತ್ರಿಪುರಾದ ಚಾರಿಲಂನಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಡೆದ ಭೀಕರ ಹಲ್ಲೆಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಇದರಲ್ಲಿ  ಪಕ್ಷದ ಸದಸ್ಯ ಶಾಹಿದ್ ಮಿಯಾ ಹತ್ಯೆಯಾಗಿದೆ  ಮತ್ತು ಇತರ ಹಲವರಿಗೆ ಗಾಯಗಳಾಗಿವೆ.

ಕಳೆದ ನಾಲ್ಕೂವರೆ ವರ್ಷಗಳಿಂದ ಬಲವಂತವಾಗಿ ಮುಚ್ಚಲಾಗಿದ್ದ ಸೆಪಹಿಜಾಲಾ ಜಿಲ್ಲೆಯ ಚಾರಿಲಂನಲ್ಲಿರುವ ಸ್ಥಳೀಯ ಸಮಿತಿ ಕಚೇರಿಯನ್ನು ಪುನಃ ತೆರೆಯಲು ಪಕ್ಷದ ಕಾರ್ಯಕರ್ತರು ತೆರಳಿದ್ದ ವೇಳೆ ಬಿಜೆಪಿ ಗೂಂಡಾಗಳ ಹಿಂಸಾತ್ಮಕ ದಾಳಿ ನಡೆದಿದೆ.

ಬಿಜೆಪಿ ಗೂಂಡಾಗಳ ಈ ಭೀಕರ ದಾಳಿಯಲ್ಲಿ, ಶಾಹಿದ್ ಮಿಯಾ ಸಾವನ್ನಪ್ಪಿದ್ದಲ್ಲದೆ, ಹಿರಿಯ ನಾಯಕ ಶಾಸಕ ಮತ್ತು ಮಾಜಿ ಹಣಕಾಸು ಸಚಿವ ಭಾನು ಲಾಲ್ ಸಾಹಾ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡರು. ಫೆಬ್ರವರಿ 2018ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತ್ರಿಪುರಾದಲ್ಲಿ ನಿರ್ಮಾಣಗೊಂಡಿರುವ ಹಿಂಸಾಚಾರದ ಸ್ಥಿತಿಯನ್ನು ಇದು ತೋರಿಸುತ್ತದೆ. ಸಿಪಿಐ(ಎಂ) ಮತ್ತು ಇತರ ವಿರೋಧ ಪಕ್ಷಗಳು ಮುಕ್ತವಾಗಿ ಕಾರ್ಯನಿರ್ವಹಿಸಲು, ತಮ್ಮ ಕಚೇರಿಗಳನ್ನು ನಡೆಸಲು ಅಥವಾ ಸಾಮಾನ್ಯ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಬಿಡುತ್ತಿಲ್ಲ.  ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇರುವಾಗ ಆಡಳಿತ ಮತ್ತು ಪೊಲೀಸರ ಶಾಮೀಲಿನೊಂದಿಗೆ ಆಡಳಿತ ಪಕ್ಷ ರಾಜಕೀಯ ವಿರೋಧಿಗಳನ್ನು ಭಯಭೀತರನ್ನಾಗಿಸುತ್ತಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಹತ್ಯೆ ಮತ್ತು ಹಿಂಸಾಚಾರಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಲು ಮತ್ತು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ.

ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ಮರಕ್ಕೆ ಕಟ್ಟಿ ಹಲ್ಲೆ; ನೊಂದ ದಲಿತ ಯುವಕ ಆತ್ಮಹತ್ಯೆ: ಆರೋಪ

Donate Janashakthi Media

Leave a Reply

Your email address will not be published. Required fields are marked *