ಬೆಂಗಳೂರು: ‘ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸಲು ಆರಂಭಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಶಾಲಾ ಮಕ್ಕಳು ಹಿಂದೆ ಉಳಿಯಬಾರದು. ಆದ್ದರಿಂದ ಸರ್ಕಾರವು 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಆರಂಭಿಸುವ ನಿರ್ಧಾರಕ್ಕೆ ಬಂದಿದೆ’ ಎಂದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ವಿದ್ಯಾರ್ಥಿ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಯುಗವು ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಂಪ್ಯೂಟರ್‌ಗಳ ಯುಗವಾಗಿದೆ.
ಇದನ್ನೂ ಓದಿ : ಸರ್ಕಾರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಸಂವಾದ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಾಹ್ಯಾಕಾಶ, ವಿಜ್ಞಾನ ಮತ್ತು ಗಗನಯಾನದ ಕುರಿತು ವಿದ್ಯಾರ್ಥಿಗಳು ಕೇಳಿದ ಕುತೂಹಲಕಾರಿ ಪ್ರಶ್ನೆಗಳಿಗೆ ಶುಕ್ಲಾ ಅವರು ಉತ್ತರಿಸಿದರು.
ಸುಮಾರು 40 ವರ್ಷಗಳ ಹಿಂದೆ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹೋದಾಗ ನಮಗೆ ಉಂಟಾದ ರೋಮಾಂಚನವನ್ನು ಶುಕ್ಲಾ ಅವರು ಮತ್ತೆ ನೆನಪಿಸುತ್ತಿದ್ದಾರೆ. ಅಂದು ನಮ್ಮ ದೇಶದ ಜನಸಂಖ್ಯೆ 100 ಕೋಟಿಗಿಂತ ಕಡಿಮೆಯಿತ್ತು. ಇಂದು 140 ಕೋಟಿ ಜನರ ಕನಸನ್ನು ಶುಕ್ಲಾ ಅವರು ಹೊತ್ತು ಸಾಗುತ್ತಿದ್ದಾರೆ. ಲಖನೌದಲ್ಲಿ ಕಷ್ಟಪಟ್ಟು ಓದಿ, ಇಂದು ಈ ಸ್ಥಾನಕ್ಕೆ ಏರಿರುವ ಅವರ ಸಾಧನೆ ಮಕ್ಕಳಿಗೆ ಮಾದರಿಯಾಗಬೇಕು’ ಎಂದು ಸಚಿವರು ಬಣ್ಣಿಸಿದರು.
ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್., ನಿರ್ದೇಶಕ ಸದಾಶಿವ ಪ್ರಭು ಬಿ. ಹಾಗೂ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರ | ತಳ ಸಮುದಾಯಕ್ಕೆ ಎಸಗುತ್ತಿರುವ ದ್ರೋಹ Janashakthi Media
