ಹೊಸ ದಿಲ್ಲಿ:ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ಜನರು ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿರುವ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಡಿಎಂಕೆ ಪಕ್ಷವು ದೂರು ನೀಡಿದೆ. ಅಷ್ಟೇ ಅಲ್ಲ, ತಮಿಳುನಾಡಿನ ಮಧುರೈ ನಗರ ಸೈಬರ್ ಕ್ರೈಂ ಪೊಲೀಸರೂ ಕೂಡಾ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ಧಾರೆ. ರಾಮೇಶ್ವರಂ ಕೆಫೆ
ತಮಿಳುನಾಡಿನ ತ್ಯಾಗರಾಜನ್ ಎಂಬುವರು ಮಧುರೈ ಸೈಬರ್ ಕ್ರೈಂ ಪೊಲೀಸರಿಗೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ದೂರು ನೀಡಿದ್ಧಾರೆ. ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಸದ್ಯ ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ.
ಈ ಪ್ರಕರಣದ ಕುರಿತಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದ ಶೋಭಾ ಕರಂದ್ಲಾಜೆ, ವಿವಾದಕ್ಕೆ ಕಾರಣವಾಗಿದ್ದರು. ಬೆಂಗಳೂರಿನ ನಗರ್ತ ಪೇಟೆಯಲ್ಲಿ ಮೊಬೈಲ್ ಮಳಿಗೆ ಮಾಲೀಕರೊಬ್ಬರ ಮೇಲೆ ಗುಂಪು ಹಲ್ಲೆ ನಡೆದಿತ್ತು. ಈ ಕುರಿತಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ತಮಿಳುನಾಡಿನ ಕೆಲವರು ಇಲ್ಲಿಗೆ ಬಂದು ತರಬೇತಿ ಪಡೆದು ಬಾಂಬ್ಗಳನ್ನು ಇಡುತ್ತಾರೆ ಎಂದು ಆರೋಪ ಮಾಡಿದ್ದರು. ಕೆಫೆಯಲ್ಲೂ ಅವರೇ ಬಾಂಬ್ ಇಟ್ಟಿದ್ದರು ಎಂದೂ ಆರೋಪಿಸಿದ್ದರು.
ಇದನ್ನು ಓದಿ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತ ವ್ಯಕ್ತಿಗಾಗಿ ಬಳ್ಳಾರಿ-ತುಮಕೂರು ಬಸ್ ನಿಲ್ದಾಣದಲ್ಲಿ ಎನ್ಐಎ ಶೋಧ
ಇನ್ನು ಈ ಪ್ರಕರಣ ಸಂಬಂಧ ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಕೂಡಾ ಬಿಜೆಪಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ ಎಂದು ಹರಿಹಾಯ್ದಿದ್ದಾರೆ. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವವರು, ಈ ಕುರಿತಾದ ಸಮಗ್ರ ಮಾಹಿತಿ ಇರುವವರು ಅಥವಾ ತನಿಖೆಯಲ್ಲಿ ಭಾಗಿಯಾಗಿರುವವರು ಮಾತ್ರ ಈ ರೀತಿ ಹೇಳಿಕೆ ನೀಡಬಹುದು ಎಂದು ಅವರು ಹೇಳಿದ್ದಾರೆ.
ಒಂದೋ ಅವರು ಎನ್ಐಎ ಅಧಿಕಾರಿ ಆಗಿರಬೇಕು, ಇಲ್ಲವೇ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ನಂಟು ಹೊಂದಿದವರು ಮಾತ್ರ ಈ ರೀತಿ ಹೇಳಿಕೆ ನೀಡಲು ಸಾಧ್ಯ ಎಂದಿರುವ ಸ್ಟಾಲಿನ್, ಈ ರೀತಿ ಹೇಳಿಕೆ ನೀಡಲು ಶೋಭಾ ಕರಂದ್ಲಾಜೆ ಅವರಿಗೆ ಅಧಿಕಾರ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ತಮಿಳರು ಹಾಗೂ ಕನ್ನಡಿಗರು ಈ ರೀತಿಯ ವಿಭಜಕ ರಾಜಕಾರಣವನ್ನು ತಿರಸ್ಕರಿಸುತ್ತಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಪ್ರಧಾನಿ ಮೋದಿ ಆದಿಯಾಗಿ ಬಿಜೆಪಿಯ ಎಲ್ಲರೂ ಈ ರೀತಿಯ ರಾಜಕಾರಣ ಬಿಡಬೇಕು ಎಂದು ಆಗ್ರಹಿಸಿರುವ ಸ್ಟಾಲಿನ್, ಚುನಾವಣಾ ಆಯೋಗ ಈ ವಿಚಾರ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕು, ದ್ವೇಷ ಭಾಷಣದ ವಿರುದ್ಧ ಕಟ್ಟು ನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ಸ್ಟಾಲಿನ್ ಆಗ್ರಹಿಸಿದ್ದಾರೆ.
ಡಿಎಂಕೆ ಪಕ್ಷದ ಹಲವು ಸಚಿವರೂ ಕೂಡಾ ಬಿಜೆಪಿ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಉದಯನಿಧಿ ಸ್ಟಾಲಿನ್, ಶೋಭಾ ಕರಂದ್ಲಾಜೆ ಅವರು ವಿಷಕಾರಿ ಹೇಳಿಕೆ ನೀಡಿದ್ಧಾರೆ ಎಂದು ಹರಿಹಾಯ್ದಿದ್ದಾರೆ.
ಇದನ್ನು ನೋಡಿ : ಚುನಾವಣಾ ಬಾಂಡ್ ಹಗರಣ| ಹೆದರಸಿ, ಬೆದರಿಸಿ ಹಣ ಪಡೆದ ಬಿಜೆಪಿJanashakthi Media