ನವದೆಹಲಿ: ಪೆಗಾಸಸ್ ಮೂಲಕ ಬೇಹುಗಾರಿಕೆ ಬಗೆಗಿನ ವಿಷಯ ಭಾರತದ ಆಂತರಿಕ ವಿಚಾರ. ಎನ್ ಎಸ್ ಒದಂತಹ ಕಂಪನಿಗಳು ತಮ್ಮ ಉತ್ಪನ್ನಗಳನ್ನ ಸರ್ಕಾರೇತರ ಕಂಪನಿಗಳಿಗೆ ಮಾರಾಟ ಮಾಡಲು ತಮ್ಮ ದೇಶ ಅನುಮತಿಸುವುದಿಲ್ಲ ಎಂದು ಇಸ್ರೇಲ್ ರಾಯಭಾರಿ ನೂರ್ ಗಿಲಾನ್ ಹೇಳಿದ್ದಾರೆ.
‘ನಾನು ಹೆಚ್ಚಿನ ವಿವರಗಳಿಗೆ ಹೋಗುವುದಿಲ್ಲ… ಎನ್ಎಸ್ಎ (ಗುಂಪು) ಒಂದು ಖಾಸಗಿ ಇಸ್ರೇಲಿ ಕಂಪನಿಯಾಗಿದೆ. ಕಂಪನಿಗಳ ಪ್ರತಿಯೊಂದು ರಫ್ತಿಗೆ ಇಸ್ರೇಲ್ ಸರ್ಕಾರದ ರಫ್ತು ಪರವಾನಗಿಯ ಅಗತ್ಯವಿರುತ್ತದೆ’ ಎಂದು ನೂರ್ ಗಿಲಾನ್ ಹೇಳಿರುವ ಬಗ್ಗೆ ಪಿ.ಟಿ.ಐ ವರದಿ ಮಾಡಿದೆ.
ಇದನ್ನು ಓದಿ: ಪೆಗಸಸ್ ಬೇಹುಗಾರಿಕೆ ತನಿಖೆಗೆ ತಜ್ಞರ ಸಮಿತಿ ರಚನೆ- ಕೇಂದ್ರ ಸರ್ಕಾರಕ್ಕೆ ಹಿನ್ನಡೆ
ಎನ್ ಎಸ್ ಒ ಗ್ರೂಪ್ʼನ ಸ್ಪೈವೇರ್ ಪೆಗಾಸಸ್ ಬಳಸಿ ಅನಧಿಕೃತ ಕಣ್ಗಾವಲು ಆರೋಪಗಳ ಬಗ್ಗೆ ಭಾರತ ಸರ್ಕಾರ ಇಸ್ರೇಲ್ ಅನ್ನು ಸಂಪರ್ಕಿಸಿದೆಯೇ ಎಂಬ ಪ್ರಶ್ನೆಗೆ ‘ಸರ್ಕಾರಗಳಿಗೆ ಮಾತ್ರ ರಫ್ತು ಮಾಡಲು ನಾವು ಈ ರಫ್ತು ಪರವಾನಗಿಯನ್ನು ನೀಡುತ್ತೇವೆ. ಅವಶ್ಯಕತೆಗಳ ಅಡಿಯಲ್ಲಿ, ಅವರು ಅದನ್ನು ಸರ್ಕಾರೇತರ ಕಂಪನಿಗಳಿಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಇನ್ನು ಇಲ್ಲಿ ನಡೆಯುತ್ತಿರುವುದು ಭಾರತದ ಆಂತರಿಕ ವಿಚಾರಾವಾಗಿದ್ದು, ನಾನು ಆ ಬಗ್ಗೆ ಮಾತನಾಡುವುದು ಸರಿಯಲ್ಲʼ ಎಂದಿದ್ದಾರೆ.
ಇದನ್ನು ಓದಿ: ಪೆಗಾಸಸ್ ಆರೋಪಗಳಲ್ಲಿ ಸತ್ಯಾಂಶವಿದ್ದರೇ, ಅದು ಗಂಭೀರವಾದದ್ದೇ: ಸುಪ್ರೀಂ ಕೋರ್ಟ್
ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳು ಸೇರಿದಂತೆ ಭಾರತೀಯ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸಲು ಪೆಗಾಸಸ್ ತಂತ್ರಾಂಶವನ್ನು ಬಳಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿದ ಒಂದು ದಿನದ ನಂತರ ಇಸ್ರೇಲ್ ರಾಯಭಾರಿಯ ಈ ಹೇಳಿಕೆ ಬಂದಿದೆ.
ನೆನ್ನೆಯಷ್ಟೇ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಮಾಜಿ ನ್ಯಾಯಾಧೀಶ ಆರ್.ವಿ. ರವೀಂದ್ರನ್ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ರಚಿಸಿ ಆದೇಶ ನೀಡಿದೆ.