ಕಮ್ಯುನಿಸ್ಟ್ ಚಳುವಳಿಯ ಪರಂಪರೆ ಮತ್ತೆ ಮರುಕಳಿಸಲಿದೆ: ಕೆ.ಯಾದವ ಶೆಟ್ಟಿ

ಬಂಟ್ವಾಳ: ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ರೈತ-ಕಾರ್ಮಿಕರ ಹೋರಾಟ ಬಂಟ್ವಾಳದಲ್ಲಿ ಪ್ರಭಾವಶಾಲಿಯಾಗಿದ್ದು ದುಡಿಯುವ ವರ್ಗದ ಆಶಾಕಿರಣವಾಗಿ ಮೂಡಿಬಂದಿತ್ತು. ಬಳಿಕ ಭೂ ಸುಧಾರಣೆ ಕಾನೂನಿನ ಜಾರಿಗಾಗಿ ನಡೆದ ಸಮರಶೀಲ ಹೋರಾಟ ಬಂಟ್ವಾಳದಲ್ಲಿ ತನ್ನದೇ ಛಾಪನ್ನು ಮೂಡಿಸಿತು ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಆಶಯ ವ್ಯಕ್ತಪಡಿಸಿದರು.

ಬಿ ಸಿ ರಸ್ತೆಯಲ್ಲಿ ನೂತನ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಂಟ್ವಾಳ ತಾಲೂಕು ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ  ಕೆ. ಯಾದವ ಶೆಟ್ಟಿ ಅವರು, ವಿವಿಧ ವಿಭಾಗದ ಕಾರ್ಮಿಕರಿಗೆ ನ್ಯಾಯ ಒದಗಿಸುವಲ್ಲಿಯೂ ಕಮ್ಯುನಿಸ್ಟರ ಪಾತ್ರವಿದೆ. ಸಮಾಜದ  ಅಭಿವೃದ್ಧಿಯಲ್ಲಿ ಕೆಂಬಾವುಟದ ಪಾತ್ರವಿದ್ದು, ಅಂತಹ ಕಮ್ಯುನಿಸ್ಟ್ ಚಳುವಳಿಯ ಪರಂಪರೆಯನ್ನು ಮತ್ತೆ ಮರುಕಳಿಸುವಂತಾಗಲು ದುಡಿಯುವ ವರ್ಗದ ಚಟುವಟಿಕೆಗಳು ಬಂಟ್ವಾಳ ತಾಲೂಕಿನಾದ್ಯಂತ ವಿಸ್ತಾರಿಸಬೇಕೆಂದು ಕರೆ ನೀಡಿದ ಅವರು, ಚಳುವಳಿಯ ಚಟುವಟಿಕೆಗಳ ಕೇಂದ್ರ ಸ್ಥಳವಾಗಿ ಸಿಪಿಐ(ಎಂ) ಕಚೇರಿ ಕಾರ್ಯನಿರ್ವಹಿಸಬೇಕು ಎಂದರು.

ಇದನ್ನು ಓದಿ: ತ್ರಿಪುರದಲ್ಲಿ ಫ್ಯಾಸಿಸ್ಟ್‌ ದಬ್ಬಾಳಿಕೆ ವಿರೋಧಿಸಿ-ಜನತೆಯನ್ನು ಬೆಂಬಲಿಸಿ ಸಿಪಿಐ(ಎಂ) ಪ್ರತಿಭಟನೆ

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ ಜನಸಾಮಾನ್ಯರ ಬದುಕಿನ ಬಗ್ಗೆ ಸದಾ ಚಿಂತಿಸಿ ಜನಪರ ಹೋರಾಟಗಳನ್ನು ಸಂಘಟಿಸಬೇಕೆಂದು ಹೇಳಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ದೇಶದ ಸೌಹಾರ್ದತಾ ಪರಂಪರೆಯನ್ನು ಉಳಿಸುವುದು ಸಿಪಿಐ(ಎಂ) ಪಕ್ಷದಿಂದ ಮಾತ್ರ. ಆ ಮೂಲಕ ದುಡಿಯುವ ಜನಗಳ ಉತ್ತಮ ಭವಿಷ್ಯ ರೂಪುಗೊಳ್ಳಲಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಸಮಸ್ತ ಮಾನವ ಕುಲದ ಏಳಿಗೆಗಾಗಿ ಶ್ರಮಿಸುವ ಕಮ್ಯೂನಿಸ್ಟ್ ಸಿದ್ಧಾಂತದಿಂದ ಮಾತ್ರವೇ ಶೋಷಿತ ಸಮುದಾಯದ ದೀನ ದಲಿತರ ಉದ್ದಾರ ಮಾಡಲು ಸಾಧ್ಯ. ದೇಶದ ಆಳುವ ವರ್ಗ ಕೋಮುವಾದ ಕಾರ್ಪೊರೇಟ್ ಮಿಶ್ರಣದಿಂದ ದೇಶದ ಸಂಪತ್ತನ್ನು ದೋಚುತ್ತಿದೆ. ಅಂತಹ ವಂಚಕರಿಂದ ದೇಶವನ್ನು ಉಳಿಸಬೇಕಾದರೆ ಕಮ್ಯೂನಿಸ್ಟ್ ಚಳುವಳಿಯನ್ನು ವಿಸ್ತಾರವಾಗಿ ಬೆಳೆಸುವುದು ಒಂದೇ ದಾರಿ ಎಂದು ಪ್ರತಿಪಾದಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಮಿಕ ವರ್ಗದ ಧ್ವನಿಯಾದ ಸಿಪಿಐ(ಎಂ) ಬಂಟ್ವಾಳದಲ್ಲಿ ನಡೆಸಿದ ಹೋರಾಟಗಳನ್ನು ಮೆಲುಕು ಹಾಕುತ್ತಾ ಭವಿಷ್ಯದ ದಿನಗಳಲ್ಲಿ ಚಳುವಳಿ ಮುನ್ನಡೆಸಲು ಇರುವ ವಿಪುಲ ಅವಕಾಶಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಸಿಪಿಐ(ಎಂ) ಹಿರಿಯ ನಾಯಕರಾದ ಬಿ ವಾಸು ಗಟ್ಟಿ, ಸಂಜೀವ ಬಂಗೇರ, ಮೋನಪ್ಪ ಸಪಲ್ಯ, ನಾರಾಯಣ ಬಡಕಬೈಲ್ ಉಪಸ್ಥಿತರಿದ್ದರು. ಜಿಲ್ಲೆಯ ಕಾರ್ಮಿಕ ಮುಖಂಡ ಬಿ ಎಂ ಭಟ್ ಶುಭಕೋರಿ ಮಾತನಾಡಿದರು.

ಸಮಾರಂಭದಲ್ಲಿ ಸಿಪಿಐ(ಎಂ) ನಾಯಕರಾದ ಸುಂದರ ಶೆಟ್ಟಿ ಮೂಡಬಿದ್ರಿ, ತಾಲೂಕು ನಾಯಕರಾದ ಉದಯ ಕುಮಾರ್, ಜನಾರ್ಧನ, ಲೋಲಾಕ್ಷಿ, ಚಂದ್ರ ಪೂಜಾರಿ, ಯುವಜನ ನಾಯಕರಾದ ಅಮೀರ್, ಅಮನ್, ಕಾರ್ಮಿಕ ನಾಯಕರಾದ ವಿಮಲ, ನಾರಾಯಣ ಮುಂತಾದವರು ಹಾಜರಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *