ಹುಬ್ಬಳ್ಳಿ : ಮಸೀದಿಯ ಚಿತ್ರದ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರ ಎಡಿಟ್ ಮಾಡಿ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಫೇಸ್‌ಬುಕ್‌ನಲ್ಲಿ, ಅಭಿಷೇಕ್ ಹಿರೇಮಠ ಎಂಬಾತ “ಮಸೀದಿಯ ಚಿತ್ರದ ಮೇಲೆ ಭಗವಾಧ್ವಜ ಹಾರಿಸಿದ” ಚಿತ್ರ ಎಡಿಟ್ ಮಾಡಿ, ‘ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ, ಜೈ ಶ್ರೀರಾಮ್, ಹಿಂದೂ ಸಾಮ್ರಾಟ್’ ಎಂದು ಚಿತ್ರದ ಮೇಲೆ ಬರೆದಿದ್ದ. ಈ ವಿವಾದಾತ್ಮಕ ಪೊಸ್ಟ್ ವಿಚಾರವಾಗಿ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ ಸಂಭವಿಸಿದೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಬಗ್ಗೆ ವರದಿಯಾಗಿದೆ.
ಘಟನೆಯಲ್ಲಿ ಇನ್‌ಸ್ಪೆಕ್ಟರ್ ಸೇರಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, ದ್ವೇಷಮಯ ವಾತಾವರಣ ಉಂಟಾಗಿದೆ.
ಪೊಲೀಸ್ ಆಯುಕ್ತ ಲಾಭುರಾಮ, ಡಿಸಿಪಿ ಸಾಹಿಲ್ ಬಾಗ್ಲಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಪೊಲೀಸ್ ಪಡೆಯೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಮುಸ್ಲಿಮ್ ಮುಖಂಡರನ್ನು ಕರೆದು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಆಗಿದ್ದೇನು? : ಹಳೆ ಹುಬ್ಬಳ್ಳಿಯ ನೇಕಾರ ನಗರ ಭಾಗದವನು ಎನ್ನಲಾದ ಅಭಿಷೇಕ್ ಹಿರೇಮಠ್, ಇಸ್ಲಾಂ ಧರ್ಮದ ಮಸೀದದಿ ಮೇಲೆ ಕೇಸರಿ ಧ್ವಜ ಹಾರಿಸಿದ, ತಲೆ ಕೆಟ್ಟರೆ ಅಲ್ಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಫೋಟೋ ಎಡಿಟ್ ಮಾಡಿ ವಿವಾದಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ. ವಿಷಯ ತಿಳಿದ ಮುಸಲ್ಮಾನ ಮುಖಂಡರು ಆತನನ್ನು ಬಂಧಿಸುವಂತೆ ಹಳೆ ಹುಬ್ಬಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ. ಯುವಕನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆತರುವಲ್ಲಿ ವಿಳಂಬವಾಗಿದೆ. ಆದರೆ ಅಷ್ಟರಲ್ಲಿ ಈ ಸಂಗತಿ ಬಹಿರಂಗವಾಗಿದೆ. ಹಳೇ ಹುಬ್ಬಳ್ಳಿ ಸೇರಿದಂತೆ ಇನ್ನಿತರ ಪ್ರದೇಶಕ್ಕೆ ಪ್ರತಿಭಟನೆ ವ್ಯಾಪಿಸುವಂತಾಯಿತು.
ಶಾಂತಿ ಕಾಪಾಡಲು ಕಮಿಷನರ್ ಮನವಿ :‘ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಕೆಲವರು ಜನರನ್ನು ಸೇರಿಸಿದ್ದು ಎಲ್ಲರೊಂದಿಗೂ ನಾವು ಚರ್ಚೆಗೆ ಮುಂದಾದೆವು. ಆದರೆ, ಜನರ ಗುಂಪು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ’ ಎಂದು ಕಮಿಷನರ್ ಲಾಭೂರಾಮ್ ಮಾಧ್ಯಮಗಳಿಗೆ ತಿಳಿಸಿದರು.
ಗಲಾಟೆಯ ಹಿಂದಿರುವ ವ್ಯಕ್ತಿಗಳ ಬಗ್ಗೆಯೂ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಶಾಂತಿ ಕಾಪಾಡಿಕೊಳ್ಳಲು ಒತ್ತು ಕೊಡಬೇಕು ಎಂದು ಮನವಿ ಮಾಡಿದರು.