‘ನೀವೇಕೆ ಪಾಕಿಸ್ತಾನಕ್ಕೆ ಹೋಗಿಲ್ಲ?’ | ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕೋಮು ಹೇಳಿಕೆ ನೀಡಿದ ಮತ್ತೊಬ್ಬ ಶಿಕ್ಷಕಿ!

ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಯ ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಶಿಕ್ಷಕರೊಬ್ಬರು ಬುಧವಾರ ಕೋಮುವಾದಿ ಹೇಳಿಕೆ ನೀಡಿದ್ದಾಗಿ ಆರೋಪಿಸಿದ್ದಾರೆ. ವಿಭಜನೆಯ ಸಮಯದಲ್ಲಿ ಅವರ ಕುಟುಂಬಗಳು ಪಾಕಿಸ್ತಾನಕ್ಕೆ ಏಕೆ ಹೋಗಲಿಲ್ಲ ಎಂದು ಅವರ ಶಿಕ್ಷಕಿ ಕೇಳಿದ್ದಾಗಿ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಸರ್ವೋದಯ ಬಾಲ ವಿದ್ಯಾಲಯದ ಶಿಕ್ಷಕಿ ಹೇಮಾ ಗುಲಾಟಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇಷ್ಟೆ ಅಲ್ಲದೆ ಕುರಾನ್ ಮತ್ತು ಕಾಬಾವನ್ನು ಟೀಕಿಸಿ ಹೇಮಾ ಗುಲಾಟಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಶುಕ್ರವಾರ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿ

ಇದನ್ನೂ ಓದಿ: “ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಸತತ ಕರೆ” ಗಳ ವಿರುದ್ಧ ಸುಪ್ರಿಂ ಕೋರ್ಟಿಗೆ ಬೃಂದಾ ಕಾರಟ್‍ ಅರ್ಜಿ

“ವಿಭಜನೆಯ ಸಮಯದಲ್ಲಿ, ನೀವು ಪಾಕಿಸ್ತಾನಕ್ಕೆ ಹೋಗಲಿಲ್ಲ, ನೀವು ಭಾರತದಲ್ಲಿಯೇ ಇದ್ದೀರಿ, ಭಾರತದ ಸ್ವಾತಂತ್ರ್ಯದಲ್ಲಿ ನಿಮ್ಮ ಕೊಡುಗೆ ಇಲ್ಲ,” ಎಂದು ಶಿಕ್ಷಕಿ ಹೇಳಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಹೇಳಿದೆ. ಇಂತಹ ಹೇಳಿಕೆಗಳು ಶಾಲೆಯೊಳಗೆ ವೈಷಮ್ಯಕ್ಕೆ ಕಾರಣವಾಗಬಹುದು ಎಂದು ವಿದ್ಯಾರ್ಥಿಗಳ ಕುಟುಂಬಗಳು ಕಳವಳ ವ್ಯಕ್ತಪಡಿಸಿದ್ದು, ಶಿಕ್ಷಕಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

“ಈ ಶಿಕ್ಷಕಿಯನ್ನು ಶಿಕ್ಷಿಸದೆ ಹೋದರೆ, ಇತರರಿಗೂ ಧೈರ್ಯ ನೀಡಿದಂತಾಗುತ್ತದೆ. ‘ನೀವು ಕೇವಲ ಕಲಿಸಿ ಹಾಗೂ ತಮಗೆ ತಿಳಿದಿಲ್ಲದ ವಿಷಯಗಳ ಬಗ್ಗೆ ಮಾತನಾಡಬೇಡಿ’ ಎಂದು ಅವರಿಗೆ ಹೇಳಬೇಕು. ಈ ಶಿಕ್ಷಕಿಯನ್ನು ಶಾಲೆಯಿಂದ ತೆಗೆದುಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ” ಶಾಲೆಯ ಇಬ್ಬರು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.

“ನಾವು ದೂರನ್ನು ಸ್ವೀಕರಿಸಿದ್ದು, ಎಫ್‌ಐಆರ್ ದಾಖಲಿಸಿದ್ದೇವೆ. ಪಕ್ರರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇದುವರೆಗಿನ ತನಿಖೆಯಲ್ಲಿ ಗಣನೀಯವಾಗಿ ಯಾವುದೂ ಬಹಿರಂಗವಾಗಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ತರಗತಿಯಲ್ಲೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಕಗಳಿಂದ ಹೊಡೆಸಿದ ಶಿಕ್ಷಕಿ

ಈ ಮಧ್ಯೆ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಬಾಜ್‌ಪೈ ಕೂಡ ಘಟನೆಯನ್ನು ಖಂಡಿಸಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಶಿಕ್ಷಕಿಯ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಈ ರೀತಿಯ ಘಟನೆ ನಡೆದಿತ್ತು. ಅಲ್ಲಿ ಶಾಲಾ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿಗಳಿಂದ ಮುಸ್ಲಿಂ ಹುಡುಗನ ಕಪಾಳಕ್ಕೆ ಹೊಡೆಯುವಂತೆ ಕೇಳುತ್ತಿರುವುದನ್ನು ಮತ್ತು ಸಮುದಾಯದ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡುತ್ತಿರುವುದು ವೈರಲ್ ವೀಡಿಯೊದಲ್ಲಿ ದಾಖಲಾಗಿದೆ.

ವಿಡಿಯೊ ನೋಡಿ: ಜಗತ್ತಿಗೆ ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದ್ದು ಟಿಪ್ಪು ಸುಲ್ತಾನ್

Donate Janashakthi Media

Leave a Reply

Your email address will not be published. Required fields are marked *