– ಎಚ್. ಆರ್. ನವೀನ್ ಕುಮಾರ್, ಹಾಸನ
ಡಾ ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧ, ಬಸವ, ಪುಲೆ, ಕುವೆಂಪು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ… ದೇಶದ ಭವಿಷ್ಯ ರೂಪಿಸುತ್ತಲೇ ನಮ್ಮ ಜೀವನ ಭವಿಷ್ಯ ಕಟ್ಟಿಕೊಳ್ಳಬೇಕಿದೆ. ನಮ್ಮ ಜೀವನದಲ್ಲಿ ಶಾಂತಿ, ಸೌಹಾರ್ದ ಇದ್ದರೆ, ಅದು ದೇಶದಲ್ಲೂ ಇರುತ್ತದೆ. ಹೌದು ದೇಶವೇ ನಾವು.”….. ಮುಂದೆ ಓದಿ …
ಧರ್ಮದ ಅಮಲಿಗೆ ಸಿಲುಕಿ, ತೇಲುತ್ತಾ ಸಮಾಜ ಕಂಠಕರಾಗಿ ಉಳಿಯುತ್ತಿರುವ ದೊಡ್ಡ ಸಂಖ್ಯೆಯ ಹಿಂದುಳಿದ ವರ್ಗದ ಯುವಜನರೇ, ಕೋಮುವಾದಿ ರಾಜಕಾರಣದ ಅಸ್ತ್ರಗಳು. ಇಂತಹ ಒಂದು ಅಸ್ತ್ರವಾಗಿ ಬಳಕೆಯಾಗಿದ್ದ ಚಿಕ್ಕಮಗಳೂರು ಮೂಲದ ಮಹೇಂದ್ರ ಕುಮಾರ್ ಸ್ವಾಭಾವಿಕವಾಗಿ ಅವರ ಮನೆ ಮತ್ತು ಅವರ ಸುತ್ತಮುತ್ತಲಿನ ಪರಿಸರದ ಸೌಹಾರ್ದ ಮನಸ್ಥಿತಿಯಿಂದ ಕೋಮುವಾದಿ ಮನಸ್ಥಿತಿಗೆ ಹೊರಳಿ, ನಂತರ ಭಜರಂಗ ದಳದ ಮುಖಂಡರಾಗಿ ಕರ್ನಾಟಕದಲ್ಲಿ ಅವರು ಮಾಡಿದ ಕೃತ್ಯಗಳಲ್ಲಿ (ದತ್ತಪೀಠ, ಚರ್ಚ್ ಮೇಲಿನ ದಾಳಿ) ಯಾವ ರೀತಿ ಯೋಜನೆಗಳನ್ನು ರೂಪಿಸಲಾಯಿತು, ಸುಳ್ಳುಗಳನ್ನು ಹೇಗೆ ವ್ಯವಸ್ಥಿತವಾಗಿ ಹುಟ್ಟುಹಾಕಲಾಯಿತು, ಇದರ ಹಿಂದೆ ಇದ್ದ ಆರ್.ಎಸ್.ಎಸ್. ಹೇಗೆ ಕೆಲಸ ಮಾಡುತ್ತಿತ್ತು, ಸಮಾಜದ ಮೇಲೆ ಅದರ ಪರಿಣಾಮಗಳೇನು ಎಂಬುದನ್ನು ಅವರ ಅನುಭವದ ಆಧಾರದಲ್ಲಿ ಬರೆದ ಸತ್ಯ ಘಟನೆಗಳ ಆಧಾರಿತ ಪಾಪನಿವೇದನೆಯ ಅತ್ಯುತ್ತಮ ಕೃತಿ ಇದಾಗಿದೆ.
ಕರೋನಾ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಮಹೇಂದ್ರ ಕುಮಾರ್ ರವರ ಜೀವನದ ಅನುಭವಗಳ ಬರವಣಿಗೆ ಪ್ರಾರಂಭವಾಗಿ ಅರ್ಧಕ್ಕೆ ನಿಂತಿತ್ತು. ಅದನ್ನು ಅತ್ಯಂತ ಜಾಗರೂಕತೆಯಿಂದ ಸಮಾಜ ತಿದ್ದುವ ಕೊಡುಗೆಯಾಗಿ ನೀಡುವಲ್ಲಿ ಶ್ರಮವಹಿಸಿದ ಸಂವೇದನಾಶೀಲ ಪರ್ತಕರ್ತ ನವೀನ್ ಸೂರಿಂಜೆಯವರೂ ಅಭಿನಂದನಾರ್ಹರು. ಮಹೇಂದ್ರ ಕುಮಾರ್ ರವರೇ ಹೇಳುವಂತೆ “ಇದು ನನ್ನೊಬ್ಬನ ಆತ್ಮಕಥೆಯಲ್ಲ, ಕೋಮುವಾದದ ಸುಳಿಗೆ ಸಿಕ್ಕು ಸತ್ತ ಮತ್ತು ನಿತ್ಯ ಸಾಯುತ್ತಿರುವ ಬಡ ಹಿಂದುಳಿದ ವರ್ಗಗಳ ಯುವಕರ ಆತ್ಮಕಥೆ”.
ಬಾಲ್ಯದಲ್ಲಿನ ಬಡತನ ಕುರಿತಾದ ಅವರ ಮಾತುಗಳೊಂದಿಗೆ ಹೆಜ್ಜೆ ಹಾಕುವಾಗ ಭಾರತದ ಇಂದಿನ ಬಹುಸಂಖ್ಯಾತ ಕುಟುಂಬಗಳು ಅನುಭವಿಸುವ ಸಂಕಟಗಳು ಕಣ್ಣ ಮುಂದೆ ಹಾದು ಹೋದಂತಾದವು. ಅವರ ಮಾತಿನ ಈ ಸಾಲುಗಳು ಇಡೀ ಬಾಲ್ಯದ ಬದುಕನ್ನ ಕಟ್ಟಿಕೊಡುತ್ತವೆ. “ನಮ್ಮದೊಂಥರಾ ಸಮುದ್ರದ ದಂಡೆ ಮೇಲಿನ ಬದುಕಿನಂತೆ. ಸಮುದ್ರದಲ್ಲಿ ನೀರಿದ್ದರೂ ಕುಡಿಯೋ ನೀರಿಗೆ ಪರದಾಡಬೇಕು. ಹಾಗೆಯೇ ನಾವು ಕೊಪ್ಪದ ಅತಿದೊಡ್ಡ ರೈಸ್ ಮಿಲ್ ಎದುರಿದ್ದರೂ, ನಿತ್ಯ ಕ್ವಿಂಟಾಲ್ ಗಟ್ಟಲೆ ಲಾರಿಗಟ್ಟಲೆ ಅಕ್ಕಿ ನೋಡುತ್ತಿದ್ದರೂ ಊಟದ ಅಕ್ಕಿಗಾಗಿ ಪರದಾಡಬೇಕಿತ್ತು.”
ಬದುಕಿನ ಮುಂದೆ ಯಾವ ಧರ್ಮವೂ ದೊಡ್ಡದಲ್ಲಾ ಎಂಬ ಸಂದೇಶವನ್ನ ಮಹೇಂದ್ರ ಕುಮಾರ್ ತಮ್ಮ ಜೀವನದ ಅನುಭವದ ಮೂಲಕ ಕಂಡುಕೊಂಡ ಸತ್ಯ. ಇಂತಹ ಹಲವು ಅನುಭವಗಳನ್ನು ಹಂಚಿಕೊಂಡ ಇವರು “ಆ ದೈವ ಸೃಷ್ಟಿಯ ರಕ್ತಕ್ಕೆ ಯಾವುದೇ ಬೇಧಗಳಿಲ್ಲ, ನಾವು ಬದುಕುತ್ತಿರೋ, ನಮಗೆ ಜೀವನ ಕೊಟ್ಟಿರೋ ಈ ನೆಲದಲ್ಲಿ ಯಾವುದೇ ಬೇಧಗಳಿಲ್ಲ. ಈ ನೆಲಕ್ಕೆ ಯಾವುದೇ ಧರ್ಮಗಳಿಲ್ಲ. ನಾವು ಬದುಕುತ್ತಿರೋ ದೇಶಕ್ಕೆ, ಪರಿಸರಕ್ಕೆ ಧರ್ಮಗಳಿಲ್ಲ. ಆದರೆ ನಾವು ಧರ್ಮ ಅಂತ ಹೇಳಿ ಕಿತ್ತಾಟಗಳನ್ನ ಮಾಡ್ತಾ, ದಿನ ಬೆಳಗಾದರೆ ನಮ್ಮೊಳಗೆ ಬಿರುಕುಗಳನ್ನು ಸೃಷ್ಟಿಸುತ್ತಾ ಬದುಕುತ್ತಿದ್ದೇವೆ.” ಒಮ್ಮೆ ಭಜರಂಗದಳದ ಸಭೆಯಲ್ಲಿ ಭಾಗವಹಿಸಿ ಮುಸ್ಲಿಮರ ವಿರುದ್ದ ಬೆಂಕಿ ಉಗುಳಿ ವಾಪಸ್ ಊರಿಗೆ ಹೋಗುವಾಗ ಮಳೆಯಿಂದಾಗಿ ಇವರ ಕಾರು ಘಾಟಿನ ಪ್ರಪಾತಕ್ಕೆ ಬಿದ್ದು ಜೀವ ಕಳೆದುಕೊಳ್ಳುವ ಸಂದರ್ಭದಲ್ಲಿ ಯಾರೂ ಸಹಾಯಕ್ಕೆ ಬರದಿದ್ದಾಗ, ಟೆಂಪೋ ಡ್ರೈವರ್ ಇವರನ್ನು ರಕ್ಷಿಸುತ್ತಾನೆ. ಆನಂತರ ಅವನು ಮುಸ್ಲಿಂ ಎಂದು ಗೊತ್ತಾಗುತ್ತದೆ. ಹೀಗೆ ಧರ್ಮವನ್ನು ಮೀರಿದ ಇಂತಹ ಹತ್ತಾರು ಬದುಕಿನ ಸಹಜ ಘಟನೆಗಳನ್ನು ಮಹೇಂದ್ರ ಕುಮಾರ್ ಇಲ್ಲಿ ದಾಖಲಿಸುತ್ತಾರೆ.
ಇದನ್ನೂ ಓದಿ : ನಿಮ್ಮದು ನಮ್ಮ ಪರಿವಾರ ಅಲ್ಲ, ನಿಮ್ಮದು ಸಂಘಪರಿವಾರ – ಪ್ರಕಾಶ್ ರೈ
ಚಿಕ್ಕಮಗಳೂರಿನ ಬಾಬಬುಡನ್ ಗಿರಿಯ ದರ್ಗಾ ಪ್ರದೇಶವನ್ನು ದತ್ತಪೀಠವನ್ನಾಗಿಸಿ ಅದನ್ನು ತಮ್ಮ ರಾಜಕೀಯ ಬೆಳವಣಿಗೆಗೆ ಮೆಟ್ಟಿಲಾಗಿಸಿಕೊಳ್ಳಲು BJP, RSS ನಡೆಸಿದ ತಂತ್ರಗಳು, ಹುಟ್ಟು ಹಾಕಿದ ಸುಳ್ಳುಗಳು ಇವುಗಳ ಕುರಿತು ಅತ್ಯಂತ ಸ್ವಾರಸ್ಯಕರವಾದ ಸತ್ಯಗಳನ್ನು ಬಯಲು ಮಾಡಿದ್ದಾರೆ.
ದರ್ಗಾದಲ್ಲಿ ಇಲ್ಲದ ಪಾದುಕೆಗಳನ್ನು ತರಿಕೆರೆಯ ಕಾರ್ಪೆಂಟರ್ ಮೂರ್ತಿಯಿಂದ ಮರದಲ್ಲಿ ಮಾಡಿಸಿ ಅದಕ್ಕೆ ಬೆಳ್ಳಿ ಕವಚ ಮಾಡಿ, ಅದನ್ನೇ ಜಿಲ್ಲೆಯಾದ್ಯಂತ ಯಾತ್ರೆ ಮಾಡಿ ಉದ್ವಿಗ್ನ ಸ್ಥಿತಿಯನ್ನು ನಿರ್ಮಾಣ ಮಾಡುವಲ್ಲಿ ಅಂದಿನ ಮಹೇಂದ್ರ ಕುಮಾರ್ ಪಾತ್ರ ದೊಡ್ಡದು. ಇದರ ಕುರಿತು ಹೀಗೆ ಬರೆಯುತ್ತಾರೆ. “ಈ ಮಧ್ಯೆ ದತ್ತ ಪಾದುಕೆ ಮಾಡಿಕೊಟ್ಟಿದ್ದ ಕಾರ್ಪೆಂಟರ್ ಮೂರ್ತಿಯವರು ನಮ್ಮನ್ನು ಸಂಪರ್ಕಿಸಿ ಪಾದುಕೆ ಮಾಡಿರುವುದರ ಹಣ ಕೊಡುವಂತೆ ಕೇಳಿಕೊಂಡರು. ನಮ್ಮ ಹುಡುಗರು ಮೂರ್ತಿಗೆ ಸರಿಯಾಗಿ ಹೊಡೆದು ಕಳಿಸಿದರು. ಇವತ್ತು ಇಡೀ ಸರ್ಕಾರ ಆ ದತ್ತ ಪಾದುಕೆಗೆ ಕೈ ಮುಗಿಯುತ್ತಿದೆ. ಇಡೀ ಹಿಂದೂಸಮುದಾಯ ಅದೇ ದತ್ತ ಪಾದುಕೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತದೆ.
ಆ ದತ್ತ ಪಾದುಕೆಯಿಂದಲೇ ಹಲವರು ಶಾಸಕರಾದರು, ಮಂತ್ರಿಗಳಾದರು. ಆ ದತ್ತಪಾದುಕೆಯನ್ನು ಕಾಯಲು ಐಎಎಸ್ ಮಾಡಿರುವ ಜಿಲ್ಲಾಧಿಕಾರಿಗೆ ಉಸ್ತುವಾರಿ ನೀಡಲಾಗಿದೆ.” ಇಡೀ ಪುಸ್ತಕದುದ್ದಕ್ಕೂ ಈ ರೀತಿಯ ಘಟನೆಗಳ ಹಿಂದಿನ ಸತ್ಯಾಸತ್ಯತೆಗಳನ್ನು ಬಯಲು ಮಾಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಚರ್ಚ್ ಮೇಲಿನ ಸರಣಿ ದಾಳಿಗಳ ಹಿಂದೆ ಇದ್ದ ಆರ್.ಎಸ್.ಎಸ್. ನ ಭ್ರಾಹ್ಮಣ್ಯದ ಆಲೋಚನೆ ಹೇಗೆ ಶೂದ್ರ ಹಿಂದುಳಿದ ಭಜರಂಗ ದಳದ ಯುವಕರನ್ನು ಬಲಿಪಶುವಾಗಿಸಿತು ಮತ್ತು ಈ ದಾಳಿಗಳಲ್ಲಿ ಆರ್.ಎಸ್.ಎಸ್ ಮನಸ್ಥಿತಿಯ ಪೊಲೀಸರು ನಡೆಸಿದ ದಾಳಿಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಚರ್ಚೆ ದಾಳಿಗಳ ಹಿಂದಿರಬಹುದಾದ ರಾಜಕೀಯ ಮತ್ತು ಆರ್ಥಿಕ ವಿಚಾರಗಳ ಕುರಿತು ವಿಭಿನ್ನ ದೃಷ್ಟಿಕೋನದಲ್ಲಿ ಯೋಚಿಸಿರುವ ಮಹೇಂದ್ರ ಕುಮಾರ್ ಅವರದ್ದೇ ಮಾತುಗಳಲ್ಲಿ ಹೀಗೆ ಹೇಳಿದ್ದಾರೆ. “ಚರ್ಚ್ ದಾಳಿಯ ಸಮಯದಲ್ಲಿ ಪೊಲೀಸರಿಗೆ ಕಲ್ಲು ತೂರಾಟ ಮಾಡಿದರು ಎಂದು ನೂರಾರು ಜನರನ್ನು ಪೊಲೀಸರು ಬಂಧಿಸಿದರು. ಅದೇ ನೆಪದಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯದ ವಿರುದ್ಧ ಹೋರಾಡುತ್ತಿದ್ದ ಕ್ರಿಶ್ಚಿಯನ್ ರೈತರನ್ನೂ, ಕ್ರಿಶ್ಚಿಯನ್ ಯುವಕರನ್ನೂ ಬಂಧಿಸಿದರು. ಎಸ್‌ಇಝಡ್ ವಿರೋಧಿ ಕ್ರಿಶ್ಚಿಯನ್ ರೈತರನ್ನು ಜೈಲಲ್ಲಿಟ್ಟು ಹಲವು ದೇವಸ್ಥಾನ, ದೈವಸ್ಥಾನಗಳನ್ನು ನೆಲಸಮ ಮಾಡಿದರು. ಈ ಸಂದರ್ಭ ವಿದ್ಯಾದಿನಕರ್ ಮತ್ತಿತರ ಹೋರಾಟಗಾರರು ಅವರನ್ನು ಬಿಡಿಸಿಕೊಂಡು ಬಂದರೂ ಬಂಡವಾಳಶಾಹಿ ಎಂಆರ್‌ಪಿಎಲ್/ವಿಶೇಷ ಆರ್ಥಿಕ ವಲಯ ಕಂಪನಿಯು ಚರ್ಚ್ ದಾಳಿಯನ್ನು ಲಾಭ ಮಾಡಿಕೊಂಡು ಹಲವು ರೈತರ ಮನೆಗಳನ್ನೂ, ನಾಗಬನ, ದೇವಸ್ಥಾನಗಳನ್ನು ಉರುಳಿಸಿತ್ತು. ವಿಶೇಷ ಆರ್ಥಿಕ ವಲಯದ ಬಹುಕೋಟಿ ಹೂಡಿಕೆಯ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆದು ರಾಜ್ಯ ಸರ್ಕಾರ, ಆರ್‌ಎಸ್‌ಎಸ್ ನಮ್ಮನ್ನು ಬಲಿಕೊಟ್ಟು ಚರ್ಚ್ ದಾಳಿಯನ್ನು ರೂಪಿಸಿತೆ ಎಂಬ ಅನುಮಾನ ನನಗೆ ಈಗಲೂ ಇದೆ.”
ಪುಸ್ತಕದ ಕೊನೆಯಲ್ಲಿನ ಅವರ ಮಾತುಗಳೇ ಧರ್ಮದ ಅಮಲಿನಲ್ಲಿ ತೇಲುತ್ತಿರುವ ಇಂದಿನ ಯುವಕರಿಗೆ ಸ್ಪಷ್ಟ ಸಂದೇಶ “ಕೊನೆಯದಾಗಿ ಒಂದು ಮಾತು ‘ನನ್ನನ್ನೂ ಸೇರಿದಂತೆ ಈ ನಾಡು ಕಟ್ಟುವ ಲಕ್ಷ ಲಕ್ಷ, ಕೋಟಿ ಕೋಟಿ ಪ್ರಗತಿಪರರನ್ನು ನೀವು ಹಿಂದೂ ವಿರೋಧಿಗಳು ಎನ್ನುವಿರಿ. ಆದರೆ ನಾವೆಲ್ಲರೂ ಭಜರಂಗದಳವೂ ಸೇರಿದಂತೆ ಎಲ್ಲಾ ತೀವ್ರವಾದಿ ಸಂಘಟನೆಗಳಲ್ಲಿರುವ ಹಿಂದುಳಿದ, ದಲಿತ ಯುವಕ ಯುವತಿಯರ ಪರ ಯಾವತ್ತೂ ಇರುತ್ತೇವೆ. ಬ್ರಾಹ್ಮಣರು ಮತ್ತು ಬಲಾಡ್ಯರನ್ನು ಬೆಳೆಸುವ ಅಂತಹ ತೀವ್ರಗಾಮಿ ಸಂಘಟನೆಗಳಿಂದ ಹೊರ ಬಂದು ನಿಮ್ಮ ಬದುಕು ಕಟ್ಟಿಕೊಳ್ಳಿ.
ಡಾ ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧ, ಬಸವ, ಪುಲೆ, ಕುವೆಂಪು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ… ದೇಶದ ಭವಿಷ್ಯ ರೂಪಿಸುತ್ತಲೇ ನಮ್ಮ ಜೀವನ ಭವಿಷ್ಯ ಕಟ್ಟಿಕೊಳ್ಳಬೇಕಿದೆ. ನಮ್ಮ ಜೀವನದಲ್ಲಿ ಶಾಂತಿ, ಸೌಹಾರ್ದ ಇದ್ದರೆ, ಅದು ದೇಶದಲ್ಲೂ ಇರುತ್ತದೆ. ಹೌದು ದೇಶವೇ ನಾವು.”
ಪ್ರಸ್ತುತ ರಾಜಕೀಯವಾಗಿ, ಸಾಮಾಜಿಕವಾಗಿ ಅತ್ಯಂತ ಸಂಕಷ್ಟದಲ್ಲಿರುವ ಈ ಕಾಲಘಟ್ಟದಲ್ಲಿ ಮಂಹೇಂದ್ರ ಕುಮಾರ್ ಅವರ ಎದೆಯದನಿ ಸಮಾಜದ ಎಲ್ಲ ಯುವ ಮನಸ್ಸುಗಳಿಗೂ, ಅದರಲ್ಲೂ ಧರ್ಮದ ಅಮಲೇರಿಸಿಕೊಂಡಿರುವ ಯುವಜನತೆಯ ಎದೆಗಳಲ್ಲಿ ಪ್ರೀತಿಯ ಕಾಳನು ಖಂಡಿತವಾಗಿಯೂ ಬಿತ್ತುತ್ತದೆ. ಆ ಮೂಲಕ ಮಹೇಂದ್ರ ಕುಮಾರ್ ಎಲ್ಲರೊಳಗೂ ಯಾವಾಗಲೂ ಜೀವಂತವಾಗಿರುತ್ತಾರೆ.
ಅತ್ಯಂತ ಪ್ರಮುಖ ವಿಷಯಗಳನ್ನು, ಅತ್ಯಂತ ಸರಳವಾಗಿ ಮಂಡಿಸಿರುವ ಈ ಕೃತಿಯನ್ನು ಎಲ್ಲರೂ ಓದಲೇಬೇಕು. ಲಡಾಯಿ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದ್ದು, 204 ಪುಟಗಳ ಪುಸ್ತಕದ ಮುಖಬೆಲೆ 200 ರೂಗಳು.