ಹಾಸನ : ಹಾಸನ ನಗರದಲ್ಲಿ ಹಾಕಲಾಗಿರುವ ಕೋಮು ಪ್ರಚೋದಿತ ಫ಼್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಮನವಿ ಮಾಡಿದೆ.
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಭಾರತೀಯರು ಯಾವುದೇ ಹಬ್ಬಗಳನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಹಬ್ಬಗಳು ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ ಮತ್ತು ಸೌಹಾರ್ದತೆ ಹಾಗೂ ಸಹಬಾಳ್ವೆಯ ಪ್ರತೀಕಗಳಾಗಿವೆ. ಆದರೆ ಭಾರತದಲ್ಲಿ ರಾಜಕೀಯ ಕಾರಣಕ್ಕೆ ಧಾರ್ಮಿಕತೆ ಮತ್ತು ಹಬ್ಬಗಳನ್ನು ಕೋಮುವಾದೀಕರಣಕ್ಕೆ ಒಳಪಡಿಸಲಾಗುತ್ತದೆ ಎಂದು ಸಮಿತಿ ಆತಂಕವ್ಯಕ್ತಪಡಿಸಿದೆ.
ಸದ್ಯದಲ್ಲೇ ಗೌರಿ-ಗಣೇಶ ಹಬ್ಬ ಬರುತ್ತಿದೆ. ಜೊತೆಗೆ ಇತರೆ ಧರ್ಮಗಳ ಹಬ್ಬಗಳೂ ಬರುತ್ತಿವೆ. ಈ ಹಬ್ಬಗಳನ್ನು ಎದುರುಗೊಳ್ಳಲು ಮತ್ತು ಆಚರಿಸಲು ಜನರು ಸಂಭ್ರಮ ಸಡಗರದಿಂದ ಕಾಯುತ್ತಿದ್ದಾರೆ. ಆದರೆ ಹಾಸನ ನಗರದಲ್ಲಿ ಕೆಲವು ಕೋಮುವಾದಿ ಶಕ್ತಿಗಳು ಈ ಹಬ್ಬಗಳ ಸಂದರ್ಭದಲ್ಲಿ ಕೋಮುಸಾಮರಸ್ಯ ಹಾಳುಮಾಡುವ ದುರುದ್ದೇಶದಿಂದ ಕೋಮುಪ್ರಚೋದನಾಕಾರಿ ಚಟುವಟಿಕೆಗಳನ್ನು ಆರಂಭಿಸಿವೆ. ‘ಹಿಂದೂ ಗಣಪತಿ ಸೇವಾ ಸಮಿತಿ’ ಎನ್ನುವ ಹೆಸರಿನಲ್ಲಿ ಸರ್ಕಾರದ ಸ್ಥಳವಾದ ಹಾಸನಾಂಭ ಕಲಾಕ್ಷೇತ್ರದಲ್ಲಿ ಗಣಪತಿ ಪ್ರತಿಸ್ಠಾಪಿಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ.
ಸರ್ಕಾರದ ಸ್ಥಳದಲ್ಲಿ ಒಂದು ನಿರ್ಧಿಷ್ಟ ಧರ್ಮದ ಆಚರಣೆಗೆ ಜಿಲ್ಲಾಡಳಿತ ಹೇಗೆ ಅವಕಾಶ ನೀಡುತ್ತಿದೆ ಎನ್ನುವುದೇ ಪ್ರಮುಖವಾದ ಪ್ರಶ್ನೆಯಾಗಿದೆ. ಇದು ನಮ್ಮ ಸಂವಿಧಾನದ ಮೂಲ ಆಶಯಗಳಿಗೆ ಬಗೆದ ಅಪಚಾರವಾಗಿದೆ. ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ‘ಹಿಂದೂ ಗಣಪತಿ’ ಎನ್ನುವ ಪರಿಕಲ್ಪನೆಯೇ ಇರಲಿಲ್ಲ ಆದರೆ ಈಗ ‘ಹಿಂದೂ’ ಹೆಸರಿನಲ್ಲಿ ಗಣಪತಿ ಪ್ರತಿಸ್ಠಾಪಿಸುವ ಪದ್ದತಿ ಆರಂಭಿಸಲಾಗಿದೆ. ಇದು ಗೌರಿ-ಗಣೇಶ ಹಬ್ಬವನ್ನು ನಿರ್ಧಿಷ್ಟವಾಗಿ ಕೋಮುವಾದೀಕರಣ ಮಾಡುವ ದುರುದ್ದೇಶವಾಗಿದೆ.
ಇದನ್ನು ಓದಿ : ರಾಜ್ಯ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ: ದಲಿತ ಸಂಘರ್ಷ ಸಮಿತಿ ಸದಸ್ಯರ ಪ್ರತಿಭಟನೆ
ಈ ‘ಹಿಂದೂ ಗಣಪತಿ’ ಪ್ರತಿಷ್ಠಾಪನೆಯ ಹೆಸರಿನಲ್ಲಿ ಹಾಸನ ನಗರದ ಎಲ್ಲೆಡೆಗಳಲ್ಲಿ ದೊಡ್ಡ ದೊಡ್ಡ ಫ಼್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಆ ಫ಼್ಲೆಕ್ಸ್‌ಗಳಲ್ಲಿ ಗೌರಿ-ಗಣೇಶ ಹಬ್ಬಕ್ಕೆ ಸಂಬಂಧಿಸಿರದ ಕೋಮು ಪ್ರಚೋದನಾಕಾರಿ ಘೋಷಣೆಗಳ ಫ಼್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಹಿಂದೂ ಸಾಮ್ರಾಜ್ಯ ಸ್ಥಾಪನೆಗಾಗಿ, ಹಿಂದುತ್ವಕ್ಕಾಗಿ ಪ್ರಾಣ ಕೊಡುತ್ತೇವೆ, ಘರ್ಜಿಸಿ ಹೇಳು ನಾನೊಬ್ಬ ಹಿಂದೂ ಹೀಗೆ ಹತ್ತು ಹಲವಾರು ಘೋಷಣೆಗಳುಳ್ಳ ದೊಡ್ಡದೊಡ್ಡ ಫ಼್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಈ ಘೋಷಣೆಗಳ ಫ಼್ಲೆಕ್ಸ್‌ಗಳನ್ನು ಇನ್ನೊಂದು ನಿರ್ಧಿಷ್ಟ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಹಾಕಲಾಗಿದೆ. ಇವು ಕೋಮು ಪ್ರಚೋದನಕಾರಿ ಫ಼್ಲೆಕ್ಸ್‌ಗಳಾಗಿವೆ. ಗೌರಿ-ಗಣೇಶ ಹಬ್ಬದ ನಂತರ ಬೇರೆ ಬೇರೆ ಧರ್ಮಗಳ ಹಬ್ಬಗಳೂ ಬರುತ್ತಿದ್ದು, ಆ ಹಬ್ಬಗನ್ನು ಆಚರಿಸುವ ಕೋಮಿನ ಜನರ ಗುರಿಯಾಗಿಸಿಕೊಂಡ ಅಳವಡಿಸಿರುವ ಫ಼್ಲೆಕ್ಸ್‌ಗಳಾಗಿವೆ.
ಇಷ್ಟೊಂದು ದೊಡ್ಡದೊಡ್ಡ ಕೋಮುಪ್ರಚೋದನಾಕಾರಿ ಫ಼್ಲೆಕ್ಸ್‌ಗಳನ್ನು ಅಳವಡಿಸಲು ಹಾಸನ ನಗರಸಭೆ ಮತ್ತು ಜಿಲ್ಲಾಡಳಿತ ಹೇಗೆ ಅನುಮತಿ ನೀಡಿದೆ ಎನ್ನುವುದೇ ಪ್ರಶ್ನೆಯಾಗಿದೆ. ಒಂದು ನಿರ್ಧಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ಹಾಕಿರುವ ಇಂತಹ ಸಮಾಜ ಘಾತುಕ ಕೋಮು ಪ್ರಚೋಧನಾಕಾರಿ ಘೋಷಣೆಗಳುಳ್ಳ ಫ್ಲೆಕ್ಸ್‌ಗಳು ಪ್ರಜಾಪ್ರಭುತ್ವ , ಸಂವಿಧಾನ, ಜಾತ್ಯಾತೀತಕ್ಕೆ ದೇಶಕ್ಕೆ ವಿರುದ್ಧವಾಗಿವೆ. ಕೂಡಲೇ ನಗರಸಭೆ, ಪೋಲೀಸು ಇಲಾಖೆ ಮತ್ತು ಜಿಲ್ಲಾಡಳಿತವು ದೇಶದ ಐಕ್ಯತೆಗೆ ದಕ್ಕೆ ತರುವ ಇಂತಹ ಫ್ಲೆಕ್ಸ್ ಗಳನ್ನು ತೆರವುಗೊಳಿಸಿ ಕಡಿವಾಣ ಹಾಕಬೇಕು ಹಾಗೂ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಹಾಸನಾಂಭ ಕಲಾಕ್ಷೇತ್ರದ(ಕಲಾಭವನ) ಆವರಣದಲ್ಲಿ. ಕೆಲವು ಕೋಮುವಾದಿ ಶಕ್ತಿಗಳು ‘ಹಿಂದೂ ಗಣಪತಿ’ ಪ್ರತಿಷ್ಠಾಪನೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಮನವಿ ಮಾಡಿದೆ.
ಇದನ್ನು ನೋಡಿ : ಬಿಜೆಪಿಯವರು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ – ಬಿ.ಕೆ. ಹರಿಪ್ರಸಾದ್Janashakthi Media