ಬೆಂಗಳೂರು : ಕೋಮು ದ್ವೇಷ ಭಾಷಣ ಹಾಗೂ ಕೋಮು ಗಲಭೆಗೆ ಪ್ರಚೋದನೆ ಆರೋಪದ ಮೇರೆಗೆ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.
‘ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರನ್ನು ಹೊಡೆದು ಓಡಿಸಿ’ ಎಂದು ಕೋಮು ದ್ವೇಷದ ಹೇಳಿಕೆ ನೀಡಿ ಆ ಸಮುದಾಯದ ಗೌರವ ಹಾಗೂ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಅಧಿಕಾರಿ ಮನೋಜ್‌ಕುಮಾರ್ ದೂರು ನೀಡಿದ್ದರು.
ಇದನ್ನೂ ಓದಿ : ರಾಜರಾಜೇಶ್ವರಿ ವಿಧಾನಸಭೆ: ಸಚಿವ ಮುನಿರತ್ನ ವಿರುದ್ಧ `ನೊಂದ ಗುತ್ತಿಗೆದಾರರು ಪ್ರಾಯೋಜಿಸುವʼ ಭಿತ್ತಿಚಿತ್ರ ಅಭಿಯಾನ
ಮುನಿರತ್ನ ಅವರು ಆರ್.ಆರ್.ನಗರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವಾಗ ಕ್ರಿಶ್ಚಿಯನ್ನರ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಬಳಿಕ ಖಾಸಗಿ ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ, “ಸ್ಲಂಗಳಲ್ಲಿ ಮತಾಂತರ ಚಟುವಟಿಕೆಗಳು” ನಡೆಯುತ್ತಿವೆ ಎಂದು ಆರೋಪಿಸಿದರು. “ಅಂತವರನ್ನು ಹೊಡೆದು ವಾಪಸ್ ಕಳುಹಿಸಬೇಕು” ಎಂದು ಜನರಿಗೆ ಕರೆ ನೀಡಿದರು. ಇದರಿಂದ ಯಾವುದೇ ಪರಿಣಾಮಗಳಾಗದಂತೆ ನೋಡಿಕೊಳ್ಳಿ ಎಂದು ಜನರಿಗೆ ಹೇಳಿದ್ದಾರೆ.
ಅಷ್ಟಕ್ಕೂ ಮುನಿರತ್ನ ವಿರುದ್ಧ ಇದೇ ಮೊದಲು ಆರೋಪ ಕೇಳಿ ಬರುತ್ತಿಲ್ಲ ಈ ಹಿಂದೆ ಮುನಿರತ್ನ ವಿರುದ್ಧ ದೂರು ದಾಖಲಿಸಲಾಗಿತ್ತು. ಬೆಂಗಳೂರು ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಹಾಲಿ ತೋಟಗಾರಿಕೆ ಸಚಿವ ಮುನಿರತ್ನ ಅವರು ಸಾರ್ವಜನಿಕ ವೇದಿಕೆ ಮೇಲೆ ಕನ್ನಡಿಗರು ಮತ್ತು ತಮಿಳರ ಮಧ್ಯೆ ಸಂಘರ್ಷಕ್ಕೆ ದಾರಿಯಾಗುವಂತೆ ಮಾತನಾಡಿದ್ದರು. ಹೀಗೆಂದು ಆರೋಪಿಸಿರುವ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾದ ಕುಸುಮಾ ಹನುಮಂತರಾಯಪ್ಪ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
#JustIn: Election Officials book #Karnataka minister @MunirathnaMLA for #HateSpeech against a minority community in a TV Interview. RR Nagar police have registered FIR against #Munirathna. @TOIBengaluru #KarnatakaElection2023 #Polls pic.twitter.com/BIRL60tx7j
— Niranjan Kaggere (@nkaggere) April 5, 2023