ಗೋಕಾಕ್ ಚಳವಳಿಯ 42ರ ಸಂಸ್ಮರಣಾ ಕಾಯಕ್ರಮ – ಡಾ. ಪುರುಷೋತ್ತಮ ಬಿಳಿಮಲೆ

ರಾಯಚೂರು: ಅಕ್ಟೋಬರ್ 5ರ ಶನಿವಾರದಂದು, ಭಾಷಾ ಚಳವಳಿಗಳಿಗೆ ಇಂದಿಗೂ ಮಾದರಿಯಾಗಿರುವ ಗೋಕಾಕ್ ಚಳವಳಿಯ 42ರ ಸಂಸ್ಮರಣಾ ಕಾಯಕ್ರಮವನ್ನು ರಾಜ್ಯ ಸರ್ಕಾರವು ರಾಯಚೂರಿನಲ್ಲಿ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಗೋಕಾಕ್ ಚಳವಳಿ ನಾಡಿನ ಇತಿಹಾಸದ ಮಹತ್ವದ ಅವಧಿಯಾಗಿದ್ದು, ಸಮಾಜದ ಎಲ್ಲ ವರ್ಗಗಳ, ಎಲ್ಲ ಪ್ರದೇಶಗಳ ಬೆಂಬಲವನ್ನು ಅದು ಪಡೆದುಕೊಂಡು ಆಳುವ ಸರ್ಕಾರ ಕನ್ನಡ ಪರವಾದ ತೀರ್ಮಾನವನ್ನು ತೆಗೆದುಕೊಳ್ಳಲು ಪ್ರೇರೇಪಣೆಯಾಯಿತು. ಇಡೀ ರಾಜ್ಯವನ್ನು ಆವರಿಸಿಕೊಂಡ ಏಕೈಕ ಚಳವಳಿ ಅದು.

ಅಂದಿನ ಸ್ಥಿತಿಗತಿಗಳ ಸ್ಮರಣೆಯು ಇಂದಿನ ದಿನಮಾನದ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸುವ ನಿಟ್ಟಿನಲ್ಲಿ ಸಹಕಾರಿಯಾಗಲೆಂಬ ಉದ್ದೇಶದಿಂದ ಗೋಕಾಕ್ ಚಳವಳಿ ಹಿನ್ನೋಟ-ಮುನ್ನೋಟ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದು ಸಶಕ್ತ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ದಿಕ್ಸೂಚಿ ನಡೆಯಾಗಲಿದೆ.

ಇದನ್ನೂ ಓದಿ: ಮುಡಾ ಪ್ರಕರಣ| ಹಗರಣದಲ್ಲಿ ಜಿಟಿ ದೇವೇಗೌಡರ ಅಕ್ರಮವು ಇದೆ: ಸ್ನೇಹಮಯಿ ಕೃಷ್ಣ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸುವುದರ ಜೊತೆಗೆ, ಗೋಕಾಕ್ ಚಳವಳಿಯ ಹಿರಿಯ ಹೋರಾಟಗಾರರುಗಳಿಗೆ ಹಾಗೂ ಚಳವಳಿಯ ಶಕ್ತಿ ಕೇಂದ್ರವಾಗಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಈ ಸಂಸ್ಥೆಗೆ ಸನ್ಮಾನಿಸುವವರಿದ್ದು, ವಿಶೇಷ ಸಾಕ್ಷ್ಯಚಿತ್ರವೊಂದನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಖ್ಯಾತ ಕವಿಗಳಾದ ಹಾಗೂ ರಾಜ್ಯಸಭಾ ಮಾಜಿ ಸದಸ್ಯರಾದ ಡಾ.ಎಲ್.ಹನುಮಂತಯ್ಯ ರವರ ಅಧ್ಯಕ್ಷತೆಯಲ್ಲಿ ಗೋಕಾಕ್ ಚಳವಳಿಯ ಹಿನ್ನೋಟದ ಗೋಷ್ಠಿ ನಡೆಯಲಿದ್ದು, ಈ ಗೋಷ್ಠಿಯಲ್ಲಿ ಹೋರಾಟದ ಅನುಭವ ಕಥನವನ್ನು ಹಿರಿಯ ಸಾಹಿತಿಗಳಾದ ಡಾ.ಅಲ್ಲಮಪ್ರಭು ಬೆಟ್ಟದೂರು ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಜಿ.ಕೆ.ಸತ್ಯ ಅವರು ತೆರೆದಿಡಲಿದ್ದಾರೆ. ಅಂದೇ ನಡೆಯಲಿರುವ ಹಿರಿಯ ಲೇಖಕಿಯಾದ ಡಾ.ಮೀನಾಕ್ಷಿ ಬಾಳಿ ಅವರ ಅಧ್ಯಕ್ಷತೆಯ ಗೋಕಾಕ್ ಚಳವಳಿಯ ಮುನ್ನೋಟದ ಗೋಷ್ಠಿಯಲ್ಲಿ ಖ್ಯಾತ ವಿಮರ್ಶಕರಾದ ಡಾ.ರಾಜೇಂದ್ರ ಚೆನ್ನಿ ಅವರು ಕನ್ನಡ ಭಾಷೆಯ ಮುಂದಿನ ಸವಾಲುಗಳು ಎಂಬ ವಿಷಯದ ಬಗ್ಗೆ ಹಾಗೂ ಡಿಜಿಟೈಸೆಷನ್ ಪರಿಣಿತರಾದ ಶ್ರೀ ಓಂಶಿವಪ್ರಕಾಶ್ ರವರು ಕನ್ನಡ ಮತ್ತು ಆಧುನಿಕ ತಂತ್ರಜ್ಞಾನ ವಿಷಯದ ಬಗ್ಗೆ ತಮ್ಮ ವಿಚಾರ ಮಂಡನೆಯನ್ನು ಮಾಡಲಿದ್ದಾರೆ.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಈ ಮಹತ್ವದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್.ಭೋಸರಾಜು, ಸ್ಥಳೀಯ ಶಾಸಕರುಗಳು, ನಿಗಮ ಮಂಡಳಿಗಳ ಅಧ್ಯಕ್ಷರುಗಳು ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಅಂದು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಗಳು ಕಾರ್ಯಕ್ರಮಗಳನ್ನು ನೀಡಲಿವೆ. ಕಾರ್ಯಕ್ರಮದ ಆರಂಭದಲ್ಲಿ ಜಾನಪದ ಕಲಾವಿದರಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮಗಳ ಮೂಲಕ ಗಡಿಭಾಗದ ರಾಯಚೂರಿನಲ್ಲಿ ಕನ್ನಡದ ಕಹಳೆ ಮೊಳಗಲಿದ್ದು, ಈ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರರು ಮತ್ತು ಸಂಘ ಸಂಸ್ಥೆಗಳೂ ಭಾಗವಹಿಸಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಮತೀಯ ದ್ವೇಷದ ವಿರುದ್ಧ ಹೋರಾಡಬೇಕಿದೆ – ಡಾ. ಎಸ್‌.ವೈ. ಗುರುಶಾಂತJanashakthi Media

Donate Janashakthi Media

Leave a Reply

Your email address will not be published. Required fields are marked *