ಜೈಪುರ: ರಾಜಸ್ಥಾನ ರಾಜ್ಯದ ಜೈಪುರದ ಶ್ಯಾಮ್ ರಂಗೇಲಾ ಎಂಬ ಕಾಮಿಡಿಯನ್ ವಿರುದ್ಧ ಪೆಟ್ರೋಲ್ ಬಂಕ್ ಮಾಲೀಕರಾದ ಸುರೇಂದ್ರ ಅಗರ್ವಾಲ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ಯಾಂ ರಂಗೇಲಾ ಫೆಬ್ರವರಿ 17ರಂದು ಜೈಪುರದ ಶ್ರೀಗಂಗಾನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಬಳಿ ಪೆಟ್ರೋಲ್ ಬೆಲೆ 100 ರೂ.ಗೆ ತಲುಪಿರುವ ಬಗ್ಗೆ ಶ್ರೀಗಂಗಾನಗರದ ಜನತೆ ಹೆಮ್ಮೆ ಪಟ್ಟುಕೊಳ್ಳುವಂತೆ ಅಣಕು ವಿಡಿಯೋವೊಂದನ್ನು ರಚಿಸಿದ್ದರು, ಆ ವಿಡಿಯೋ ವೈರಲ್ ಆಗಿತ್ತು.
ವಿಡಿಯೋದಲ್ಲಿ “ನನ್ನ ಪ್ರೀತಿಯ ಭಾರತೀಯರೇ, ಪೆಟ್ರೋಲ್ ಬೆಲೆ ರೂ.100 ತಲುಪಿದ ಕಾರಣ ರಾಜಸ್ಥಾನದ ಶ್ರೀಗಂಗಾನಗರ ಬಹಳ ಹೆಮ್ಮೆ ಪಟ್ಟಿದೆ. ಪೆಟ್ರೋಲ್ಗೆ ತನ್ನ ನಿಜವಾದ ಮೌಲ್ಯವನ್ನು ಒದಗಿಸುವ ಯಾವುದೇ ಇಂತಹ ಸರಕಾರ ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಂದಿಲ್ಲ, ನಾವು ಪೆಟ್ರೋಲ್ಗೆ ಅದರ ಹಕ್ಕನ್ನು ಕೊಟ್ಟಿದ್ದೇವೆ. ಶ್ರೀಗಂಗಾನಗರ್ ಮಾತ್ರವಲ್ಲ ಇಡೀ ದೇಶಕ್ಕೆ ಕೂಡ ಇಂತಹ ಅವಕಾಶ ದೊರೆಯಲಿದೆ ಎಂದು ನಿಮಗೆ ಭರವಸೆ ನೀಡಬಲ್ಲೆ. ದೇಶದ ಪ್ರಯೋಜನಕ್ಕಾಗಿ ನಾವು ಕೂಡ ಪೆಟ್ರೋಲ್ ಅನ್ನು ರೂ.100 ಕ್ಕೆ ಖರೀದಿಸುತ್ತಿದ್ದೇವೆ. ಪೆಟ್ರೋಲ್ ಬೆಲೆ ಹೆಚ್ಚಿಸಿದರೆ ಸಮಸ್ಯೆಯಾಗುತ್ತದೆ ಎಂದು ವಿಪಕ್ಷಗಳು ಹೇಳುತ್ತಿವೆ. ಆದರೆ ನಾನು ಯಾವತ್ತೂ ಹೇಳಿದಂತೆ, ಎಲ್ಲಕ್ಕಿಂತಲೂ ದೇಶ ಮೊದಲು,” ಎಂದು ವೈರಲ್ ಆದ ತಮ್ಮ ವೀಡಿಯೋದಲ್ಲಿ ರಂಗೀಲಾ ಹೇಳಿದ್ದಾರೆ.
ವೈರಲ್ ಆದ ವಿಡಿಯೋ ವೀಕ್ಷಿಸಿ https://youtu.be/zjE4iydpxE8
ಶ್ರೀಗಂಗಾನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಚಿತ್ರೀಕರಿಸಲಾಗಿದ್ದ ಹಾಗೂ ರಂಗೀಲಾ ಶೇರ್ ಮಾಡಿದ್ದ ವಿಡಿಯೋ ವೈರಲ್ ಆಗಿದ್ದರಿಂದ ವಿಚಲಿತರಾದ ಬಂಕ್ ಮಾಲಕ ಸುರೇಂದ್ರ ಅಗರ್ವಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೂಲಗಳ ಪ್ರಕಾರ ಸುರೇಂದ್ರ ಅವರ ಬಂಕ್ಗೆ ಇಂಧನ ಪೂರೈಕೆ ಮಾಡುವ ಕಂಪೆನಿಯು ದೂರು ನೀಡುವಂತೆ ಸೂಚಿಸಿತ್ತು. ಈ ಸೂಚನೆ ಪಾಲಿಸದೇ ಇದ್ದಲ್ಲಿ ನಿಮ್ಮ ಬಂಕ್ಗೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ನಿಲ್ಲಿಸಲಾಗುವುದು.
ಈ ನಡುವೆ ರಂಗೀಲಾ ಅವರು ಪ್ರತಿಕ್ರಿಯಿಸಿ ತಾವು ಯಾರದ್ದಾದರೂ ಭಾವನೆಗಳನ್ನು ನೋಯಿಸಿದ್ದೇ ಆದಲ್ಲಿ ಕ್ಷಮೆಯಾಚಿಸಲು ಸಿದ್ಧ ಆದರೆ ಯಾರಿಗಾದರೂ ನೋವುಂಟು ಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ, ವೀಡಿಯೋ ತೆಗೆಯುವುದಿಲ್ಲ ಎಂದು ಹೇಳಿದ್ದಾರೆ.