ಎಡ ಅಧ್ಯಕ್ಷೀಯ ಅಭ್ಯರ್ಥಿ ಪೆತ್ರೊ ಮತ್ತು ಉಪಾಧ್ಯಕ್ಷೀಯ ಅಭ್ಯರ್ಥಿ ಫ್ರಾನ್ಸಿಯ ಮಾರ್ಕ್ವೇಝ್
ಲ್ಯಾಟಿನ್ ಅಮೆರಿಕದ ಕೊಲಂಬಿಯದಲ್ಲಿ ಮೇ 29ರಂದು ಅಧ್ಯಕ್ಷೀಯ ಚುನಾವಣೆಗಳು ನಡೆದಿದ್ದು ಎಡ ಪಂಥೀಯ ಒಕ್ಕೂಟ `ಹಿಸ್ಟಾರಿಕ್ ಪ್ಯಾಕ್ಟ್’ (ಚಾರಿತ್ರಿಕ ಒಪ್ಪಂದ) ನ ಅಭ್ಯರ್ಥಿ ಗುಸ್ತಾವೊ ಪೆತ್ರೊ ಮೊದಲ ಸುತ್ತಿನಲ್ಲಿ ಶೇ.40.3 (80 ಲಕ್ಷ ) ಮತ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಮೊದಲ ಸುತ್ತಿನ ಜಯ ಗಳಿಸಿದ್ದಾರೆ. ರೊಡೊಲ್ಫೊ ಹೆರ್ನಾಂಡೀಸ್ ಶೇ.28.1 (ಸುಮಾರು 60 ಲಕ್ಷ) ಮತ ಗಳಿಸಿ ಎರಡನೆಯ ಸ್ಥಾನದಲ್ಲಿದ್ದಾರೆ. ಎರಡನೆಯ ಸ್ಥಾನದಲ್ಲಿರುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಫೆಡೆರಿಕೊ ಗುಟಿಯರೇಸ್ ಶೇ.23.9 (ಸುಮಾರು 50 ಲಕ್ಷ) ಮತ ಗಳಿಸಿ ಮೂರನೆಯ ಸ್ಥಾನದಲ್ಲಿದ್ದಾರೆ. ಕೊಲಂಬಿಯದ ಚುನಾವಣಾ ನಿಯಮಗಳ ಪ್ರಕಾರ ಯಾರೂ ಶೇ.50 ಮತ ಗಳಿಸದಿದ್ದರೆ ಎರಡನೆಯ ಸುತ್ತಿನ ಮತದಾನ ನಡೆಯುತ್ತದೆ. ಮೊದಲ ಎರಡು ಸ್ಥಾನದಲ್ಲಿದ್ದವರು ಎರಡನೆಯ ಸುತ್ತಿಗೆ ಅಭ್ಯರ್ಥಿಗಳಾಗುತ್ತಾರೆ. ಹಾಗಾಗಿ ಪೆತ್ರೊ ಮತ್ತು ಹೆರ್ನಾಂಡೀಸ್ ಎರಡನೆಯ ಸುತ್ತಿಗೆ ಹೋಗಿದ್ದಾರೆ. ಜೂನ್ 19ರಂದು ಎರಡನೆಯ ಸುತ್ತಿನ ಮತದಾನ ನಡೆಯಲಿದೆ.
ಇತರ ಲ್ಯಾಟಿನ್ ಅಮೆರಿಕದ ದೇಶಗಳಂತಲ್ಲದೆ, ಕೊಲಂಬಿಯ ಅದರ 200ಕ್ಕೂ ಹೆಚ್ಚು ವರ್ಷಗಳ ಸ್ವತಂತ್ರ ಇತಿಹಾಸದಲ್ಲಿ ಎಂದೂ ಪ್ರಗತಿಪರ ಎಡಪಂಥೀಯ ಸರಕಾರಗಳನ್ನು ಕಂಡದ್ದಿಲ್ಲ. ಯಾವತ್ತೂ ಯು.ಎಸ್. ನ ಕೈಗೊಂಬೆಗಳಾದ ಬಲಪಂಥೀಯ ಅಥವಾ ಮಿಲಿಟರಿ ಸರ್ವಾಧಿಕಾರಿಗಳೇ ಇಲ್ಲಿ ಆಡಳಿತ ನಡೆಸಿದ್ದಾರೆ. ಭ್ರಷ್ಟಾಚಾರ ಮತ್ತು ಪಾರಾ ಮಿಲಿಟರಿ ದಬ್ಬಾಳಿಕೆ ತಾಂಡವವಾಡುತ್ತಿತ್ತು. ಅದರ ವಿರುದ್ಧ ಎಡ ಗೆರಿಲ್ಲಾ ಯುದ್ಧ ಅನಿವಾರ್ಯವಾಗಿತ್ತು. ಆದರೆ ದೇಶ ಯು.ಎಸ್. ಬೆಂಬಲಿತ ಸರಕಾರಿ ಸೈನ್ಯ, ಪಾರಾ ಮಿಲಿಟರಿ ಪಡೆ ಮತ್ತು ಎಡ ಗೆರಿಲ್ಲಾ ಗಳ ನಡುವಿನ ರಣರಂಗವಾಗಿತ್ತು. ಕೆಲವು ವರ್ಷಗಳ ಹಿಂದೆ ಶಾಂತಿ ಒಪ್ಪಂದವಾಗಿದ್ದರೂ ಸರಕಾರ ತಾನು ಒಪ್ಪಿದ ಷರತ್ತುಗಳನ್ನು ಪೂರೈಸದೆ ಶಾಂತಿಸ್ಥಾಪನೆ ಪೂರ್ಣ ಸಫಲವಾಗಿರಲಿಲ್ಲ. ಹಾಗಾಗಿ ಆ ದೇಶದ ಇತಿಹಾಸದಲ್ಲೇ ಮೊದಲ ಎಡಪಂಥೀಯ ಸರಕಾರವನ್ನು ಎದುರು ನೋಡುತ್ತಿದೆ.
ಮೊದಲ ಸುತ್ತಿನ ಎರಡೂ ಬಲಪಂಥೀಯ ಅಭ್ಯರ್ಥಿಗಳು ಉಗ್ರ ಬಲಪಂಥೀಯ ಮಾಜಿ ಅಧ್ಯ ಕ್ಷ (2002-10) ಅಲ್ವರೊ ಉರಿಬೆ ಯ ಮತ್ತು ಆತನ ಶಿಷ್ಯ ಪ್ರಸ್ತುತ ಅಧ್ಯಕ್ಷ ಇವಾನ್ ಡುಕ್ ಸಹಚರರು. ಹೆರ್ನಾಂಡೀಸ್ ರೀಯಲ್ ಎಸ್ಟೇಟ್ ಕುಳ ಮತ್ತು ಮೆಗಾ ಮನೆಮಾಲಿಕ. ಮೂರನೆಯ ಸ್ಥಾನ ಪಡೆದ `ಟೀಮ್ ಫಾರ್ ಕೊಲಂಬಿಯ’ದ ಗುಟಿಯರೇಸ್ ಮೊದಲು ಯು.ಎಸ್ ಮತ್ತು ಉರಿಬೆ ಯ ಮುಖ್ಯ ಬಲಪಂಥೀಯ ಅಭ್ಯರ್ಥಿಯಾಗಿದ್ದು ಪ್ರಚಾರ ಜೋರಾದಂತೆ ಅವರ ಸಾಧ್ಯತೆ ತಣ್ಣಗಾದ್ದರಿಂದ ಹೆರ್ನಾಂಡೀಸ್ ನ್ನು ಮುಂದಕ್ಕೆ ತಂದರು ಎನ್ನಲಾಗಿದೆ. ಈಗ ಬಲಪಂಥೀಯ ಮತಗಳೆಲ್ಲ ಹೆರ್ನಾಂಡೀಸ್ ಸುತ್ತ ಕ್ರೋಡೀಕೃತವಾಗಲಿದೆ.
ಎಡ ಅಭ್ಯರ್ಥಿ ಪೆತ್ರೊ ಕ್ರಾಂತಿಕಾರಿ ಎಪ್ರಿಲ್ 19 ಚಳುವಳಿಯ ನಾಯಕರಾಗಿದ್ದು, ರಾಜಧಾನಿ ಬೊಗೊಟಾದ ಚುನಾಯಿತ ಮೇಯರ್ ಮತ್ತು ಎರಡು ಬಾರಿ ಎಡ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರು. `ಶಾಂತಿ ಮತ್ತು ಪ್ರಜಾಸತ್ತೆ ಸ್ಥಾಪನೆ’ ತನ್ನ ಆದ್ಯತೆ ಎಂದು ಪೆತ್ರೊ ಹೇಳಿದ್ದಾರೆ. ಎಡ ಅಭ್ಯರ್ಥಿಯ ಜಯದ ಸಾಧ್ಯತೆ ಹೆಚ್ಚಿದ್ದು ಅದನ್ನು ವಿಫಲಗೊಳಿಸಲು ಯು.ಎಸ್ ಮತ್ತು ಕೊಲಂಬಿಯ ಸರಕಾರಗಳು ಮತ್ತು ಆಳುವ ವರ್ಗಗಳು ಶತಪ್ರಯತ್ನ ಮಾಡುತ್ತಿವೆ. ಎಡ ಅಭ್ಯರ್ಥಿ ಗೆ ಕೊಲೆ ಬೆದರಿಕೆ ಹಾಕಲಾಗಿದೆ. ಇದು ಬರಿಯ ಒಣ ಬೆದರಿಕೆಯಲ್ಲ. ಹಿಂದೆ ವಿರೋಧ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಕಂಡಾಗೆಲ್ಲ ನಾಲ್ಕು ಅಧ್ಯಕ್ಷೀಯ ಅಭ್ಯರ್ಥಿಗಳ ಹತ್ಯೆ ಮಾಡಲಾಗಿದೆ. ಹಿಂಸಾಚಾರ ಸೃಷ್ಟಿಸಿ ಕೆಲವು ಕಡೆ ಪ್ರಚಾರಕ್ಕೆ ಹೋಗದಂತೆ ಮಾಡಲಾಗಿದೆ.