ಬೆಳಗಾವಿ: ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು

ಬೆಳಗಾವಿ: ಕುಂದಾಪುರದ ಕೆಲವು ಕಾಲೇಜುಗಳ ವಿದ್ಯಾರ್ಥಿನಿಯರು ಹಿಜಾಬ್‌, ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು ವಿವಾದ ಸೃಷ್ಟಿಯಾಗಿರುವ ನಡುವೆಯೇ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಹಾಜರಾದ ಘಟನೆ ನಡೆದಿದೆ.

ಹಿಜಾಬ್​ ಧರಿಸಲು ಅವಕಾಶ ಬೇಕು ಎಂದು ಒಂದು ಕಡೆ ವಿದ್ಯಾರ್ಥಿಗಳು ಬೇಡಿಕೆ ಇಟ್ಟರೆ ಮತ್ತೊಂದು ಕಡೆ ಇದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಈಗಾಗಲೇ, ಉಡುಪಿ, ಕುಂದಾಪುರ, ಭದ್ರಾವತಿ, ಚಿಕ್ಕಮಗಳೂರಿನ ಕೊಪ್ಪ ಕಾಲೇಜಿನಲ್ಲಿ ವಸ್ತ್ರಸಂಹಿತೆ ವಿವಾದದ ಚರ್ಚೆ ಮತ್ತೆ ಆರಂಭವಾಗಿದೆ.

ಗುರುವಾರದಂದು ರಾಮದುರ್ಗ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತರಗತಿಯಿಂದ ಹೊರಬರುವ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿರುವುದು ಹಾಗೂ ಕೆಲವರಿಗೆ ಹಾಕಿಕೊಳ್ಳುವಂತೆ ವ್ಯಕ್ತಿಗಳಿಬ್ಬರು ಸೂಚಿಸುವುದು ವಿಡಿಯೊದಲ್ಲಿದೆ.

ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೂಡಲೇ ಕೇಸರಿ ಶಾಲು ತೆಗಸಿ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದಾರೆ.

ಕಾಲೇಜಿಗೆ ಸಂಬಂಧವಿಲ್ಲದ ಯುವಕರು ಬಂದು ಈ ರೀತಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು. ಅವರನ್ನು ಕಾಲೇಜಿಗೆ ಬಾರದಂತೆ ಪಿಎಸ್ಐ ಕಠಿಣ ಎಚ್ಚರಿಕೆ ನೀಡಿದ್ದಾರೆ. ಘಟನೆ ಬಳಿಕ ಇಂದು ಕಾಲೇಜಿಗೆ ಪ್ರಾಂಶುಪಾಲ ಆನಂದ ಲಾಲಸಂಗಿ ಅವರು ಆಗಮಿಸಿದರು. ಕಾಲೇಜು ಆಡಳಿತ ಮಂಡಳಿ ನಿನ್ನೆ ನಡೆದ ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದು, ಇಂದು ಈ ಬಗ್ಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *