ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕನ ಬಂಧನ

ಕೊಯಮತ್ತೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯು ನಡೆದಿದ್ದು, ಈಗಾಗಲೇ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ. ಆತನನ್ನು 15 ದಿನಗಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಅಲ್ಲದೆ, ಇನ್ನೂ ಇಬ್ಬರನ್ನು ಬಂಧಿಸುವಂತೆ ಒತ್ತಾಯಿಸಿ ದೊಡ್ಡ ಪ್ರತಿಭಟನೆಯೂ ನಡೆದಿದೆ.

ಚಿನ್ಮಯ ವಿದ್ಯಾಲಯದ 12ನೇ ತರಗತಿಯ ವಿದ್ಯಾರ್ಥಿನಿ ಪತ್ರವೊಂದನ್ನು ಬರೆದಿದ್ದು, ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪ್ರಾಂಶುಪಾಲೆ ಮೀರಾ ಜಾಕ್ಸನ್ ಅವರಿಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾಳೆ. ಅಲ್ಲದೆ, ಇತರ ಇಬ್ಬರು ವ್ಯಕ್ತಿಗಳನ್ನು ದೂಷಿಸಿದ್ದಾರೆ ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ವಿದ್ಯಾರ್ಥಿನಿ ಶಾಲೆಯನ್ನು ಬದಲಾವಣೆ ಮಾಡಿದ್ದು, ಇತ್ತೀಚೆಗೆ ವರ್ಗಾವಣೆ ಪ್ರಮಾಣ ಪತ್ರ ಪಡೆದು ಬೇರೆ ಶಾಲೆಗೆ ಸೇರಿದ್ದಳು. ಆದರೆ, ಘಟನೆಯಿಂದ ಆಕೆ ಮನನೊಂದಿದ್ದಳು ಎಂದು ವರದಿಯಾಗಿದೆ. ನವೆಂಬರ್‌ 11ರಂದು ಸಂಜೆ ಉಕ್ಕಡಂನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.

ಆರೋಪಿ ಶಿಕ್ಷಕ ಮಿಥುನ್ ಚಕ್ರವರ್ತಿ(31) ಸಂತ್ರಸ್ತ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಆತನ ಸಂಭಾಷಣೆಯ ಸಾಕ್ಷ್ಯವನ್ನು ಬಾಲಕಿಯ ಮೊಬೈಲ್ ಫೋನ್‌ನಲ್ಲಿ ಸಂಗ್ರಹವಾಗಿದೆ ಎಂದು ಪೊಲೀಸರ ವರದಿಯಾಗಿದೆ.

ನ್ಯೂಸ್ 9 ಸುದ್ಧಿಸಂಸ್ಥೆಯೊಂದಿಗೆ ವಿದ್ಯಾರ್ಥಿನಿಯ ಸಹಪಾಠಿಯೊಬ್ಬಳು “ಶಾಲಾ ಶಿಕ್ಷಕನ ಕಿರುಕುಳದಿಂದ ಅವಳು ಮಾನಸಿಕವಾಗಿ ಕುಗ್ಗಿಹೋಗಿದ್ದಳು. ಅವಳು ತುಂಬಾ ವಿಚಲಿತಳಾಗಿದ್ದಳಲ್ಲದೆ, ಸಾಮಾನ್ಯವಾಗಿ ಇತರ ಪುರುಷರರಿಗೂ ಹೆದರುತ್ತಿದ್ದಳು. ಆಕೆಯ ಮೇಲಿನ ನಡೆದ ಘಟನೆಯು ಅಸಹ್ಯವೆನಿಸಿದೆ ಎಂದು ಹೇಳುತ್ತಲೇ ಇದ್ದಳು. ಶಾಲೆಯಲ್ಲಿ ಒಮ್ಮೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಹಲವು ಬಾರಿ ಕಿರುಕುಳ ನೀಡಿದ್ದಾನೆ ಎನ್ನುತ್ತಿದ್ದಳು. ಅವನ ಪತ್ನಿ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಳೆ. ಅವಳು ಮತ್ತು ಪ್ರಾಂಶುಪಾಲರಿಗೆ ಇದೆಲ್ಲ ಗೊತ್ತಿದ್ದರೂ ಅವರು ಏನೂ ಮಾಡಲಿಲ್ಲ” ಎಂದು ಹೇಳಿದ್ದಾಳೆ.

ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಶಾಲಾ ಪ್ರಾಂಶುಪಾಲರನ್ನು ಬಂಧಿಸುವಂತೆ ಪೋಷಕರು ಮತ್ತು ಸಂಬಂಧಿಕರು ಒತ್ತಾಯಿಸಿದ್ದಾರೆ. ಅವರನ್ನು ಬಂಧಿಸುವವರೆಗೂ ಶವವನ್ನು ಸ್ವೀಕರಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ವಿದ್ಯಾರ್ಥಿನಿಯರು ಮತ್ತು ಮಹಿಳಾ ಸಂಘಟನೆಗಳು, ಎಐಡಿಡಬ್ಲ್ಯೂಎ, ಎಸ್‌ಡಿಪಿಐ ಮತ್ತು ತಂಥೈ ಪೆರಿಯಾರ್ ದ್ರಾವಿಡರ್ ವಿದುತಲೈ ಕಳಗಂ ಪ್ರತಿನಿಧಿಗಳನ್ನು ಒಳಗೊಂಡ 100ಕ್ಕೂ ಹೆಚ್ಚು ಜನರು ಬಾಲಕಿಯ ಮನೆ ಮುಂದೆ ಜಮಾಯಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ)ಯ ರಂಗನಾಯಕಿ ಮಾತನಾಡಿ  “ಆರೋಪಿ ಮಿಥುನ್ ಚಕ್ರವರ್ತಿ ಸಂತ್ರಸ್ತ ಬಾಲಕಿಗೆ ಹಲವಾರು ತಿಂಗಳುಗಳಿಂದ ಅವಾಚ್ಯವಾಗಿ ಮತ್ತು ದೈಹಿಕವಾಗಿ ನಿಂದಿಸಿದ್ದಾನೆ. ಈ ವಿಷಯವನ್ನು ಆಕೆ ಪ್ರಾಂಶುಪಾಲರಿಗೆ ತಿಳಿಸಿದ್ದರೂ ಸಹ ಯಾವುದೇ ಕ್ರಮಕೈಗೊಳ್ಳಲು ಆಡಳಿತ ಮಂಡಳಿ ವಿಫಲವಾಗಿದೆ. ಈ ಪ್ರಕರಣದಲ್ಲಿ ಇಡೀ ಆಡಳಿತ ಮಂಡಳಿಯು ಸಾಮೂಹಿಕವಾಗಿ ಜವಾಬ್ದಾರಿಯನ್ನು ಹೊಂದಿದೆ. ಆಕೆಯ ಸಾವು, ಶಿಕ್ಷಕ, ಪ್ರಾಂಶುಪಾಲರು ಮತ್ತು ಶಾಲಾ ಆಡಳಿತ ಮಂಡಳಿಯ ಇತರರನ್ನು ಕೂಡಲೇ ಬಂಧಿಸಬೇಕೆಂದುʼʼ ಆಗ್ರಹಿಸಿದ್ದಾರೆ.

ಯುಜಿಸಿ ಮಾರ್ಗಸೂಚಿಗಳ ಆಧಾರದಂತೆ ಔಪಚಾರಿಕವಾಗಿ ಐಸಿಸಿ (ಆಂತರಿಕ ದೂರುಗಳ ಸಮಿತಿ) ಸ್ಥಾಪಿಸಲು ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವಂತೆ ಕೋಯಮತ್ತೂರಿನ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಪ್ರತಿಭಟನಾಕಾರರು ಒತ್ತಾಯಿಸಿದರು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲೈಂಗಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಇಂತಹ ಅಪರಾಧಗಳನ್ನು ತಡೆಗಟ್ಟಲು ಮಾನವ ಹಕ್ಕುಗಳ ಕಾರ್ಯಕರ್ತರು, ಶಾಸಕರು, ಪೊಲೀಸ್ ಅಧಿಕಾರಿಗಳು, ಪೋಷಕರ ಸಂಘದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳನ್ನು ಒಟ್ಟುಗೂಡಿಸಲು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಲಾಗಿದೆ.

ಆತ್ಮಹತ್ಯೆ ಪತ್ರದಲ್ಲಿ ಶಿಕ್ಷಕ ಮತ್ತು ಪ್ರಾಂಶುಪಾಲರ ಹೆಸರು ಇವೆ ಎಂದು ಪೊಲೀಸರು ತಿಳಿಸಿದ್ದು, ಶಿಕ್ಷಕನನ್ನು ಉಡುಮಲ್‌ಪೇಟೆಯ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ನಡೆದ ಲೈಂಗಿಕ ಕಿರುಕುಳದ ಆಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗದ ಕಾರಣ 17 ವರ್ಷದ ಬಾಲಕಿ ಕಳೆದ ಗುರುವಾರದಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆರೋಪಿ ಮಿಥುನ್ ಚಕ್ರವರ್ತಿ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು ಸೆಕ್ಷನ್ 9(I) ರ ಅಡಿಯಲ್ಲಿ ಪೋಕ್ಸೋ ಕಾಯ್ದೆಯ 10 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಂಶುಪಾಲರು ಪೊಲೀಸ ವಶದಲ್ಲಿದ್ದಾರೆ ಎಂದು ಸಚಿವರು ತಿಳಿಸಿದ ನಂತರ ಸಂತ್ರಸ್ತ ಬಾಲಕಿಯ ಕುಟುಂಬದವರು ಭಾನುವಾರ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಬಾಲಕಿಯ ಶವವನ್ನು ಸ್ವೀಕರಿಸಿತು. ಮಧ್ಯಾಹ್ನ ಬಾಲಕಿಯ ಅಂತ್ಯಸಂಸ್ಕಾರ ನಡೆದಿದೆ.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಟ್ವೀಟ್ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *