ಬಹುತೇಕರ ದಿನಚರಿ ಆರಂಭವಾಗುವುದು, ಸ್ನೇಹ ಬೆಳೆಸಲು ಸೇತುವೆಯಾಗಿ ಕೆಲಸ ನಿರ್ವಹಿಸುವಲ್ಲಿ ಕಾಫಿಯ ಪಾತ್ರ ಮಹತ್ತರವಾದದ್ದು. ಇಂತಹ ಕಾಫಿ ನಮ್ಮೆಲ್ಲರ ಕೈಗೆ ಬರುವುದರ ಹಿಂದೆ (ಬೆಟ್ಟದಿಂದ ಬಟ್ಟಲಿಗೆ) ಹಲವು ಕೈಗಳ ದೊಡ್ಡ ಶ್ರಮವೇ ಅಡಗಿದೆ. ಒಂದೆಡೆ ಈ ಕಾಫಿಯನ್ನು ಬೆಳೆಯುವ ರೈತರು ಮತ್ತೊಂದೆಡೆ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು.
ಭಾರತದಲ್ಲಿ ರಫ್ತಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿಯನ್ನು ಬೆಳೆದು ನಾಡಿಗೆ ಕೊಡುವ ಕಾಫಿ ಬೆಳೆಗಾರರನ್ನು ಅತ್ಯಂತ ಶ್ರೀಮಂತರು, ಇವರುಗಳು ಪ್ಲಾಂಟರ್‌ಗಳು ಇವರು ಸಮಾಜದ ಇತರೆ ವರ್ಗದ ಜನರೊಂದಿಗೆ ಬೆರೆಯುವುದಿಲ್ಲ. ಹೀಗೆಲ್ಲಾ ಚರ್ಚೆಗಳು ಪ್ರಚಲಿತದಲ್ಲಿವೆ. ಆದರೆ ಕಾಫಿ ಬೆಳೆಯುವವರೆಲ್ಲಾ ದೊಡ್ಡ ಶ್ರೀಮಂತರಲ್ಲ. ಭಾರತದಲ್ಲಿ ಶೇ 99 ರಷ್ಟು ಕಾಫಿ ಬೆಳೆಗಾರರು 10 ಎಕ್ಕರೆಗಳಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಸಣ್ಣ ಬೆಳೆಗಾರರಾಗಿದ್ದಾರೆ. ಇವರು ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ 75 ರಷ್ಟು ಕೊಡುಗೆಯನ್ನ ನೀಡುತ್ತಿದ್ದಾರೆ.
ಇಂತಹ ಸಣ್ಣ ಬೆಳೆಗಾರರು ಇಂದು ದೊಡ್ಡ ಪ್ರಮಾಣದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಸಣ್ಣ ಬೆಳೆಗಾರರು ಬೆಳೆದ ಕಾಫಿಗೆ ಸರಿಯಾದ ಮಾರುಕಟ್ಟೆಯನ್ನ ಒದಗಿಸಿ ನ್ಯಾಯಯುತವಾದ ಬೆಲೆಯನ್ನು ನೀಡುವ ವ್ಯವಸ್ಥೆ ನಿರ್ಮಾಣವಾಗಿಲ್ಲ. ಸಣ್ಣ ಬೆಳೆಗಾರರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಲಾಗದಿರುವುದರಿಂದ ಬಹುತೇಕ ಲಾಭ ಮಧ್ಯವರ್ತಿಗಳಿಗೆ ಮತ್ತು ದೊಡ್ಡ ದೊಡ್ಡ ಕಂಪನಿಗಳಿಗೆ ಹೋಗುತ್ತಿದೆ. ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ನಿರಂತರ ಇಳಿಕೆಯಾಗುತ್ತಿವೆ. ಇದರಿಂದ ಬೆಳೆಗಾರರು ನಷ್ಟವನ್ನ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸಣ್ಣ ಕಾಫಿ ಬೆಳೆಗಾರರನ್ನು ಸಂಘಟಿಸಲು ಅಖಿಲ ಭಾರತ ಮಟ್ಟದಲ್ಲಿ ಅಖಿಲ ಭಾರತ ಕಿಸಾನ್ ಸಭಾ ನಾಯಕತ್ವದಲ್ಲಿ “ಕಾಫಿ ಫಾಮರ‍್ಸ್ ಫೆಡರೇಷನ್ ಆಫ್ ಇಂಡಿಯಾ” ಸಂಘಟನೆಯನ್ನು ಸ್ಥಾಪಿಸಲಾಗಿದೆ. ದೇಶದ ಪ್ರಮುಖ ಮೂರು ರಾಜ್ಯಗಳಲ್ಲೇ ಶೇ 92 ರಷ್ಟು ಕಾಫಿ ಉತ್ಪಾಧನೆಯಾಗುತ್ತದೆ (ಕರ್ನಾಟಕ ಶೇ 53, ಕೇರಳ ಶೇ 28, ತಮಿಳುನಾಡು ಶೇ 11) ಉಳಿದಂತೆ ಅಂಧ್ರಪ್ರದೇಶ, ಒರಿಸ್ಸಾ, ತ್ರಿಪುರ ಮತ್ತು ಅಸ್ಸಾಂ ರಾಜ್ಯಗಳಲ್ಲಿಯೂ ಸ್ಪಲ್ಪ ಪ್ರಮಾಣದಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ.
ಕಾರ್ಪೋರೇಟೀಕರಣ ವಿರೊಧಿಸಿ, ಲಾಭದಾಯಕ ಬೆಲೆ ಖಾತ್ರಿಪಡಿಸಲು ಆಗ್ರಹಿಸಿ, ರೈತರ ಉತ್ಪನ್ನಗಳ ಸಹಕಾರಿ ಸಂಘಗಳಿಗೆ ಅಗತ್ಯ ಸರ್ಕಾರಿ ನೆರವಿಕೆ ಒತ್ತಾಯಿಸಿ ಕಾಫಿ ಬೆಳೆಯುವ ರಾಜ್ಯಗಳಲ್ಲಿ ಕಾಫಿ ಬೆಳೆಗಾರರನ್ನು ಸಂಘಟಿಸಿ ಅವರ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಕಾಫಿ ಬೆಳೆಗಾರರ ಪ್ರಥಮ ಅಖಿಲ ಭಾರತ ಸಮ್ಮೇಳನವನ್ನು ಕೇರಳದ ವೈನಾಡಿನ ವೆಲ್ಲಮುಂಡಾದಲ್ಲಿ 2022 ಅಕ್ಟೋಬರ್ 26-27ರಂದು ಎರಡು ದಿನಗಳ ಕಾಲ ನಡೆಸಲಾಗುತ್ತಿದೆ.
ಕಾಫಿ ಬೆಳೆಯುವ ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನವನ್ನು ಕೇರಳದ ಮಾಜಿ ಹಣಕಾಸು ಸಚಿವರಾದ ಡಾ.ಥಾಮಸ್ ಐಸಾಕ್ ಉಧ್ಘಾಟಿಸಲಿದ್ದು ಬಹಿರಂಗಸಭೆಯನ್ನು ಎಂ.ಎಂ.ಮಣಿಯವರು ಉದ್ಘಾಟಿಸಲಿದ್ದಾರೆ. ಈ ಸಭೆಯಲ್ಲಿ ಪಿ.ಕೃಷ್ಣಪ್ರಸಾದ್, ಡಿ.ರಂವೀಂದ್ರನ್, ವಾಲ್ಸ್ನ್ ಪನೋಳಿ, ಪಿ.ಕೆ.ಸುರೇಶ್, ಎಚ್.ಆರ್.ನವೀನ್‌ಕುಮಾರ್ ಭಾಗವಹಿಸಲಿದ್ದಾರೆ.