ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಜೀವಂತವಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿ ಪ್ರವಾಸ ಕೈಗೊಳ್ಳುತ್ತಿರುವುದು ಕೂತುಹಲ ಮೂಡಿಸಿದೆ.
ಸಿಎಂ ಕಚೇರಿಯ ಮೂಲಗಳ ಪ್ರಕಾರ, ಜುಲೈ 16 ರಂದು ಸಿಎಂ ದೆಹಲಿ ಪ್ರವಾಸ ಕೈಗೊಂಡಿದ್ದು, ಮೇಕೆದಾಟು ಯೋಜನೆ, ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳು, ಲಸಿಕೆ ಹೆಚ್ಚುವರಿ, ಬಾಕಿ ಜಿಎಸ್ಟಿ ಅನುದಾನ ಸಂಬಂಧ ಚರ್ಚೆಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದರೂ ಈ ಭೇಟಿ ಇದೊಂದೆ ವಿಷಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂಬುದು ರಾಜಕೀಯ ಲೆಕ್ಕಾಚಾರ.
ಇದೇ ತಿಂಗಳ 26ರಂದು ಯಡಿಯೂರಪ್ಪ ನೇತೃತ್ವದ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಸಂಪುಟ ಪುನಾರಚನೆ ಅಥವಾ ಸಂಪುಟ ವಿಸ್ತರಣೆ ಸೇರಿದಂತೆ ಆಡಳಿತ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ತರುವ ಬಗ್ಗೆ ವರಿಷ್ಠರ ಜೊತೆ ಸಮಾಲೋಚನೆ ನಡೆಸುವ ಸಂಭವ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡದೆ ಹೆಚ್ಚೂ ಕಡಿಮೆ ಆರು ತಿಂಗಳು ಆಗಿದೆ. ಬಹುತೇಕ ವೀಡಿಯೋ ಸಂವಾದ ಹಾಗೂ ದೂರವಾಣಿ ಮೂಲಕ ಪಕ್ಷದ ವರಿಷ್ಠರು ಹಾಗೂ ಕೇಂದ್ರದ ವಿವಿಧ ಸಚಿವರೊಂದಿಗೆ ಚರ್ಚೆ ನಡೆಸಿದ್ದರು.
ಆದರೆ ಯಡಿಯೂರಪ್ಪನವರ ಈಗಿನ ದೆಹಲಿ ಪ್ರವಾಸ ಅನೇಕ ಆಯಾಮಗಳನ್ನು ತೆರದಿಡುತ್ತಿದೆ. ಜುಲೈ 09 ರಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ದೆಹಲಿಗೆ ಹೋಗಿದ್ದರು. ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ದೂರು ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನಾಯಕತ್ವ ಬದಲಾವಣೆ ಮತ್ತು ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಯತ್ನಾಳ್ ಹಲವು ಬಾರಿ ಮಾತನಾಡಿದ್ದರು. ಇದೇ ವಿಚಾರಕ್ಕೆ ಯಡಿಯೂರಪ್ಪ ದೆಹಲಿಗೆ ಹೋಗುತ್ತಿರಬಹುದು ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.
ಇದೇ ವೇಳೆ ಕಳೆದ ವಾರವಷ್ಟೆ ಬಿ.ಎಲ್ ಸಂತೋಷ್ ಬಿಜೆಪಿ ಅಧ್ಯಕ್ಷ ಹಾಗೂ ಪ್ರಧಾನಿ ಜೊತೆ ಕರ್ನಾಟಕದ ಸಂಘಟನಾ ವಿಚಾರಗಳನ್ನು ಚರ್ಚಿಸಿದ ವಿಚಾರ ಗುಟ್ಟಾಗಿ ಏನೂ ಇಲ್ಲ. ಸಚಿವ ಮುರಗೇಶ್ ನಿರಾಣಿ ಕೂಡಾ ದೆಹಲಿಗೆ ಹೋಗಿದ್ದರು. ಈ ಎಲ್ಲಾ ಅಂಶಗಳನ್ನು ಗಮನಿಸುತ್ತಿದ್ದರೆ ನಾಯಕತ್ವ ಬದಲಾವಣೆಯ ಬುಲಾವ್ ಇದಾಗಿರಬಹುದು ಎಂದು ಬಿಜೆಪಿಯೊಳಗೆ ಗುಸು ಗುಸು ಕೇಳಿ ಬರುತ್ತಿದೆ.