ಮುಡಾ ಸೈಟ್ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಪ್ರಕ್ರಿಯೆಗೆ ಆರಂಭಿಸದಂತೆ ಸೂಚಿಸಿರುವ ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.
ತಮ್ಮ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಆದೇಶಕ್ಕೆ ತಡೆ ಕೋರಿ ಸಿದ್ದರಾಮಯ್ಯ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಸೋಮವಾರ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ಆದೇಶದವರೆಗೂ ಪ್ರಾಸಿಕ್ಯೂಷನ್ ಪ್ರಕ್ರಿಯೆ ಆರಂಭಿಸದಂತೆ ಕೆಳಗಿನ ನ್ಯಾಯಾಲಯಗಳಿಗೆ ಸೂಚಿಸಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದೆ.
ಸಿದ್ದರಾಮಯ್ಯ ಪರ ಹಿರಿಯ ಹಿರಿಯ ವಕೀಲ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ರವಿ ವರ್ಮಾ ಕುಮಾರ್ ಅರ್ಜಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ವಕೀಲ ಮನು ಸಿಂಘ್ವಿ ವಾದ ಮಂಡಿಸಿದರು.
ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಸಿದ್ದರಾಮಯ್ಯ ಹಲವಾರು ವಿಷಯಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ ರಾಜ್ಯಪಾಲರ ಕರ್ತವ್ಯ ಲೋಪವನ್ನು ಉಲ್ಲೇಖಿಸಿದ್ದಾರೆ. ಜುಲೈ 26ರಂದು ದೂರುದಾರರು ದೂರು ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಶೋಕಾಸ್ ನೋಟಿಸ್ ನೀಡುವ ಮೂಲಕ ರಾಜ್ಯಪಾಲರು ವಿವೇಚನೆ ರಹಿತವಾಗಿ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಬೊಟ್ಟು ಮಾಡಿ ತೋರಿಸಿದರು.
ಅಬ್ರಾಹಂ ಎಂಬ ವ್ಯಕ್ತಿ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಶೋಕಾಸ್ ನೋಟಿಸ್ ನೀಡಿದ್ದನ್ನು ಸಚಿವ ಸಂಪುಟ ಪ್ರಶ್ನಿಸಿದೆ. ಅಲ್ಲದೇ ಸಚಿವ ಸಂಪುಟ ಹಾಗೂ ಕಾನೂನು ವಿಭಾಗ ರಾಜ್ಯಪಾಲರಿಗೆ ಸೂಕ್ತ ಮಾಹಿತಿ ಒದಗಿಸಿದ್ದೂ ಅಲ್ಲದೇ ಶೋಕಾಸ್ ನೋಟಿಸ್ ವಾಪಸ್ ಪಡೆಯುವಂತೆ ಸಲಹೆ ನೀಡಿದೆ. ಸಚಿವ ಸಂಪುಟದ ಸಲಹೆಯನ್ನು ಪಾಲಿಸಬೇಕಾದ ರಾಜ್ಯಪಾಲರು ಸಂಪುಟದ ನಿರ್ಣಯಕ್ಕೆ ಕನಿಷ್ಠ ಉತ್ತರವನ್ನೂ ನೀಡದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿಂದೆ ರಾಜಕೀಯ ಉದ್ದೇಶಗಳು ಸ್ಪಷ್ಟವಾಗಿ ಕಾಣುತ್ತವೆ ಎಂದು ವಕೀಲ ಮನು ಸಿಂಘ್ವಿ ವಾದ ಮಂಡಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎಂದಿಗೂ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಡಾ ಸೈಟು ಪಡೆದಿಲ್ಲ. ಅಥವಾ ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಆದರೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ವರ್ಷಗಳೇ ಕಳೆದಿದ್ದರೂ ರಾಜ್ಯಪಾಲರು ಇನ್ನೂ ಆ ಬಗ್ಗೆ ಅನುಮತಿ ನೀಡಿಲ್ಲ ಎಂದು ಹೈಕೋರ್ಟ್ ಮುಂದೆ ವಾದ ಮಂಡಿಸಲಾಯಿತು.