ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ)ದ ಸಭೆಯಲ್ಲಿ ನೀಡಿದ ಭರವಸೆ ಅನುಸಾರ ಸಿಎಂ ಸಿದ್ದರಾಮಯ್ಯ ಅವರು ಸೋಮವಾರದಿಂದ ಜಿಲ್ಲಾವಾರು ಕಾಂಗ್ರೆಸ್ ಶಾಸಕರ ಸಭೆಯನ್ನು ಸಿಎಂ ಸಿದ್ದರಾಮಯ್ಯ ಅವರು ಸೋಮವಾರ (ಆಗಸ್ಟ್-07) ಕರೆದಿದ್ದಾರೆ.
ವರ್ಗಾವಣೆ ಶಿಫಾರಸು ಮತ್ತು ಅನುದಾನದ ವಿಚಾರದಲ್ಲಿ ಸಚಿವರು ಸ್ಪಂದಿಸುತ್ತಿಲ್ಲವೆಂದು ಪತ್ರ ಬರೆದು ಕೆಲವು ಶಾಸಕರ ಅಪಸ್ವರ ಎತ್ತಿದ ಹಿನ್ನೆಲೆಯಲ್ಲಿ ಈ ಸಭೆ ನಿಗದಿಯಾಗಿದೆ. ಶಾಸಕರ ಅಹವಾಲನ್ನು ವಿಸ್ತೃತವಾಗಿ ಆಲಿಸಿ ಪರಿಹಾರ ಸೂಚಿಸಲು ಜಿಲ್ಲಾವಾರು ಸಭೆ ನಡೆಸುವುದಾಗಿ ಇತ್ತೀಚಿನ ಸಿಎಲ್‌ಪಿ ಮೀಟಿಂಗ್‌ನಲ್ಲಿ ಸಿಎಂ ಹೇಳಿದ್ದರು. ಅದರಂತೆ ಮೊದಲ ಹಂತದಲ್ಲಿ ತುಮಕೂರು,ಯಾದಗಿರಿ,ಚಿತ್ರದುರ್ಗ,ಬಾಗಲಕೋಟೆ,ಬಳ್ಳಾರಿ,ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು,ಸಚಿವರು ಹಾಗೂ ಶಾಸಕರ ಜೊತೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಜುಲೈ-31ರಿಂದ ಮಳೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ: ಸಿಎಂ ಸಿದ್ದರಾಮಯ್ಯ
ತಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುತ್ತಿಲ್ಲವೆಂದು 30 ಕ್ಕೂ ಹೆಚ್ಚು ಶಾಸಕರು ಇತ್ತೀಚೆಗೆ ಮುಖ್ಯಮಂತ್ರಿಗೆ ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆಯೂ ಒತ್ತಾಯಿಸಿದ್ದರು. ಆಳಂದ ಶಾಸಕ ಬಿ.ಆರ್. ಪಾಟೀಲ ಅವರ ಹೆಸರಿನಲ್ಲಿ ಮುಖ್ಯಮಂತ್ರಿಗೆ ಬರೆದರು ಎನ್ನಲಾದ ಪತ್ರವೊಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೂ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್ ರ‍್ಯಾಡಿಸನ್ ಬ್ಲೂನಲ್ಲಿ ಜುಲೈ 27ರಂದು ಸಭೆ ನಡೆದಿತ್ತು. ಸಭೆಯಲ್ಲಿ ಮಾತನಾಡಿದ್ದ ಕೆಲವು ಹಿರಿಯ ಶಾಸಕರು, ಸಚಿವರ ಕಾರ್ಯವೈಖರಿಯನ್ನು ನೇರವಾಗಿಯೇ ಪ್ರಶ್ನಿಸಿದ್ದರು.
ಆ ಸಭೆಯಲ್ಲಿ ಶಾಸಕರಿಗೆ ಮಾತು ನೀಡಿದ್ದ ಸಿದ್ದರಾಮಯ್ಯ, ‘ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ. ಮಾಧ್ಯಮಗಳ ಮುಂದೆ ಮಾತನಾಡಬೇಡಿ’ ಎಂದು ಸಲಹೆ ನೀಡಿದ್ದರು. ಅಲ್ಲದೆ, ‘ಆಡಳಿತಾತ್ಮಕ ಒತ್ತಡಗಳಿದ್ದರೂ ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆದು ಕ್ಷೇತ್ರಗಳ ಕುಂದುಕೊರತೆಗಳ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರದಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದರು.