ಚಂದ್ರಯಾನ-3: ಇಸ್ರೊ ಇಸ್ಟ್ರಾಕ್ ಕೇಂದ್ರಕ್ಕೆ ಭೇಟಿ ನೀಡಿ ಸನ್ಮಾನಿಸಿ, ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಲ್ಲಿನ ಪೀಣ್ಯದಲ್ಲಿರುವ ಇಸ್ರೊ ಕಂಟ್ರೋಲ್ ರೂಂಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜ್ಞಾನಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿರುವ ಇಸ್ರೊ ವಿಜ್ಞಾನಿಗಳ ಸಾಧನೆ ಭಾರತದ ಪಾಲಿಗೆ ಐತಿಹಾಸಿಕವಾದದ್ದು ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಡೀ ಜಗತ್ತು ಭಾರತದತ್ತ ಅಚ್ಚರಿಯಿಂದ ನೋಡುವ ಪ್ರಶಂಸನೀಯ ಕೆಲಸವನ್ನು ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಇಡೀ ಜಗತ್ತಿನಲ್ಲಿ ಇದುವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮೂರು ದೇಶಗಳು ಇದುವರೆಗೆ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ್ದವು. ಭಾರತ ನಾಲ್ಕನೇ ದೇಶವಾಗಿದ್ದು ಅದು ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯನ್ನು ಇಳಿಸಿರುವುದು ಅತ್ಯಂತ ಅಭಿನಂದನೀಯ ಎಂದು ಹೇಳಿದರು.

ಇದನ್ನೂ ಓದಿ:‘ಚಂದ್ರಯಾನ-3’ ಸಕ್ಸಸ್, ಇತಿಹಾಸ ಬರೆದ ಭಾರತ!

ಚಂದ್ರಯಾನ-3 ಲ್ಯಾಂಡಿಂಗ್ ಆಗುವುದನ್ನು ಲೈವ್ ಆಗಿ ವೀಕ್ಷಿಸಿದ್ದು ನನಗೆ ಬಹಳ ಖುಷಿಯಾಯಿತು. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆ ಇಳಿಸುವುದು ಸಣ್ಣ ವಿಷಯವಲ್ಲ. ವಿಜ್ಞಾನಿಗಳದ್ದೊಂದು ಇದು ದೊಡ್ಡ ಸಾಧನೆ. ಇದಕ್ಕಾಗಿ ದೇಶಾದ್ಯಂತ 1000ಕ್ಕೂ ಹೆಚ್ಚು ವಿಜ್ಞಾನಿಗಳು ಈ ಚಂದ್ರಯಾನ-3ರಲ್ಲಿ ಹಗಲಿರುಳು ಹಲವು ವರ್ಷಗಳಿಂದ ಶ್ರಮಿಸಿದ್ದು ಬೆಂಗಳೂರು-ಕರ್ನಾಟಕದಿಂದಲೇ 500 ವಿಜ್ಞಾನಿಗಳು ಜೊತೆಯಾಗಿದ್ದರು ಎಂದರು.

ಸೆಪ್ಟೆಂಬರ್ 2ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಚಂದ್ರಯಾನ-3ರ ಯಶಸ್ಸಿನಲ್ಲಿ ಭಾಗವಹಿಸಿದ  500ಕ್ಕೂ ಹೆಚ್ಚು ವಿಜ್ಞಾನಿಗಳನ್ನು ಸರ್ಕಾರ ವತಿಯಿಂದ ಗುರುತಿಸಿ ಅವರಿಗೆ ಉತ್ತೇಜನ ನೀಡಲು ಸನ್ಮಾನಿಸಲಾಗುವುದು. ಈ ಕರಿತು ಈಗಾಗಲೇ ಇಸ್ರೊ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *