ಬೆಂಗಳೂರು : ಜೂನ್ 11 ರಂದು ಶಕ್ತಿ ಯೋಜನೆಗೆ ವಿನೂತನವಾಗಿಯೇ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ.
ಬಿಎಂಟಿಸಿಯ ರೂಟ್ ನಂಬರ್ 43ರ ಬಸ್‌ನಲ್ಲಿ ಭಾನುವಾರ ಕಂಡಕ್ಟರ್ ಆಗುವ ಸಿದ್ದರಾಮಯ್ಯ ಮಹಿಳಾ ಪ್ರಯಾಣಿಕರ ಬಳಿ ತೆರಳಿ ಟಿಕೆಟ್ ಟಿಕೆಟ್ ಎನ್ನುತ್ತಾ ಉಚಿತ ಟಿಕೆಟ್ ವಿತರಿಸಲಿದ್ದಾರೆ! ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕಿ ಗ್ಯಾರಂಟಿ ಯೋಜನೆಗಳಲ್ಲಿ ಮೊಟ್ಟಮೊದಲ ಯೋಜನೆಯಾಗಿ ಶಕ್ತಿ ಯೋಜನೆ ಜೂನ್ 11ರಂದು ಜಾರಿಗೆ ಬರಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ‘ಶಕ್ತಿ’ ಯೋಜನೆ ಈ ರೀತಿ ವಿಭಿನ್ನವಾಗಿ ಉದ್ಘಾಟನೆಗೊಳ್ಳಲಿದೆ.
ಸಿಎಂ ಸಿದ್ದರಾಮಯ್ಯ ಅವರು ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ತೆರಳುವ ರೂಟ್ ನಂ. 43ರಲ್ಲಿ ಕಂಡಕ್ಟರ್ ಆಗಿ ಮಹಿಳೆಯರಿಗೆ ಟಿಕೆಟ್ ವಿತರಿಸಲಿದ್ದಾರೆ. ಬಳಿಕ ವಿಧಾನಸೌಧದಲ್ಲಿ ಜರುಗುವ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ವೇಳೆ ಶಕ್ತಿ ಯೋಜನೆಯ ಲೋಗೋ ಹಾಗೂ ಸ್ಮಾರ್ಟ್ ಕಾರ್ಡ್ ಕೂಡ ಬಿಡುಗಡೆಯಾಗಲಿದೆ. ಸಿದ್ದರಾಮಯ್ಯ ಅವರಿಗೆ ಈ ಸಮಯದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ಕೊಡಲಿದ್ದಾರೆ.
ಜಿಲ್ಲೆಗಳಲ್ಲಿ ಜಿಲ್ಲಾ ಮುಖ್ಯಸ್ಥರು, ಸಚಿವರು, ಶಾಸಕರು ಯೋಜನೆಗೆ ಏಕಕಾಲದಲ್ಲಿ ಚಾಲನೆ ನೀಡಲಿದ್ದಾರೆ. ಗ್ಯಾರಂಟಿ ಯೋಜನೆಗಳು ಉದ್ಘಾಟನೆ ಕೂಡ ವಿಭಿನ್ನವಾಗಿರಬೇಕು ಎಂಬ ಆಲೋಚನೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಉಳಿದ ನಾಲ್ಕು ಗ್ಯಾರಂಟಿಗಳನ್ನು ಐದು ವಿಭಾಗೀಯ ಕೇಂದ್ರಗಳಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ.