ನನಗಾಗಲಿ, ನನ್ನ ಕುಟುಂಬದವರಿಗಾಗಲಿ ಆಸ್ತಿ ಮಾಡುವ ವ್ಯಾಮೋಹ ಇಲ್ಲ. ಜೆಡಿಎಸ್-ಬಿಜೆಪಿ ಎಷ್ಟೇ ಪಾದಯಾತ್ರೆ ಮಾಡಿದರೂ ನಾನು ಬೆದರಿಕೂ ಬಗ್ಗೋದು ಇಲ್ಲ, ಜಗ್ಗೋದು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಬೃಹತ್ ಜನಾಂದೋಲನ ಸಭೆಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿಯವರು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಒತ್ತಡಕ್ಕೆ ಸಿಲುಕಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಆದರೆ ನಾನು ಈ ಯಾವ ಒತ್ತಡಕ್ಕೂ ಬಗ್ಗುವುದೂ ಇಲ್ಲ. ಜಗ್ಗುವುದೂ ಇಲ್ಲ ಎಂದರು.
ನಾನು ರಾಜಕೀಯಕ್ಕೆ ಬಂದಿರುವುದು ಹಣ ಸಂಪಾದನೆಗೆ ಅಲ್ಲ. ದಲಿತರು, ಶೋಷಿತರು ಹಾಗೂ ಹಿಂದುಳಿದವರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನ್ಯಾಯ ಕೊಡಿಸಬೇಕು ಎಂಬ ಕಾರಣಕ್ಕೆ. ನನ್ನ 4 ದಶಕಗಳ ರಾಜಕೀಯ ಜೀವನದಲ್ಲಿ ಎಂದೂ ಭ್ರಷ್ಟಾಚಾರ ಮಾಡಿಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಾಗಿದ್ದು, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಅವರು ಹೇಳಿದರು.
ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಚುನಾವಣೆಗೆ ಒಂದೂ ಬಾರಿಯೂ ನಾನು ಖರ್ಚು ಮಾಡಿಲ್ಲ. ನನ್ನ ಪತ್ನಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ನಾನು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಬಂದಿಲ್ಲ ಎಂದು ಅವರು ವಿವರಿಸಿದರು.
ವಾಲ್ಮೀಕಿ ಮಂಡಳಿಯಲ್ಲಿ ಭ್ರಷ್ಟಾಚಾರ ಆಗಿಲ್ಲ ಎಂದು ಹೇಳಿಲ್ಲ. ಭ್ರಷ್ಟಾಚಾರ ಆಗಿದೆ. ಆದರೆ ನನ್ನ ಸರ್ಕಾರ ಭಾಗಿಯಾಗಿಲ್ಲ. ಇಡಿಯವರು ಯಾವುದೇ ದಾಖಲೆ ಇಲ್ಲದೇ ಇದ್ದರೂ ನನ್ನನ್ನು ಸಿಲುಕಿಸಲು ಪ್ರಯತ್ನಿಸಿದರು. ಆದರೆ ನನ್ನ ಪಾತ್ರ ಇಲ್ಲದ ಕಾರಣ ಹಿಂದೆ ಸರಿದರು. ಈಗ ರಾಜಕೀಯವಾಗಿ ನನ್ನನ್ನು ಮುಗಿಸಲು ಮುಡಾ ಹಗರಣ ತೆಗೆದು ಪಾದಯಾತ್ರೆ ಮಾಡುತ್ತಿದ್ದರು ಎಂದು ಅವರು ವಿವರಿಸಿದರು.
ಯಡಿಯೂರಪ್ಪ 82ನೇ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಮಾಡಿದ್ದಕ್ಕಾಗಿ ಫೋಕ್ಸೊ ಕಾಯ್ದೆಯಡಿ ಚಾರ್ಜ್ ಶೀಟ್ ಹಾಕಿಸಿಕೊಂಡಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ 18ರಿಂದ 20 ಹಗರಣಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಪ್ರೇರಣಾ ಟ್ರಸ್ಟ್ ನಿಂದ ಚೆಕ್ ಮೂಲಕ ಹಣ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾರೆ. ಇವರು ಮತ್ತು ಮಗ ವಿಜಯೇಂದ್ರ ನನ್ನ ರಾಜೀನಾಮೆ ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ 20 ಸಾವಿರ ಕೋಟಿ ರೂ. ಹಗರಣದಲ್ಲಿ ಭಾಗಿಯಾಗಿದ್ದಾರೆ. 27 ಕಂಪನಿಗಳಿಗೆ ನವೀಕರಣ ಮಾಡಿ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಸಂಪಾದಿಸಿದ್ದಾರೆ. ಆದರೆ ನನಗೆ ಇದುವರೆಗೆ ಮೈಸೂರಿನಲ್ಲಿ ಮನೆಯೇ ಇರಲಿಲ್ಲ. ಹಿಂದೆ ಇದ್ದ ಎರಡು ಮನೆಯನ್ನು ಸಾಲ ತೀರಿಸಲು ಮಾರಿದೆ. ಈಗ ಮನೆ ಕಟ್ಟುತ್ತಿದ್ದೇನೆ. ಇದು ನನ್ನ ಇತಿಹಾಸ. ನನ್ನಂತಹವನಿಂದ ರಾಜೀನಾಮೆ ಕೇಳಲು ನಾಚಿಕೆಯಾಗಲ್ವಾ ಎಂದು ಸಿದ್ದರಾಮಯ್ಯ ಕೇಳಿದರು.