ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಪ್ರಧಾನಿ ನರೇಂದ್ರ ಮೋದಿಯ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ವಕ್ತಾರರೊಬ್ಬರು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ನಿರಂತರ ಧ್ವನಿಯೆತ್ತುತ್ತಿರುವ ಲೋಕಸಭೆಯ “ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಎದೆಗೆ ಗುಂಡು ಹೊಡೆಯುತ್ತೇವೆ, ಹುಷಾರ್..!!” ಎಂದು ಬಹಿರಂಗವಾಗಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ನೋಡಿದರೆ ಹೇಳಿಕೆಯ ಬಗ್ಗೆ ಅವರಿಗೂ ಸಮ್ಮತಿ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‌ತಮ್ಮ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

ಬೆದರಿಕೆ ಒಡ್ಡಿ ಸೈದ್ಧಾಂತಿಕ ವಿರೋಧಿಗಳ ಧ್ವನಿ ಅಡಗಿಸುವುದು, ಅದಕ್ಕೂ ಬಗ್ಗದಿದ್ದಾಗ ಅವರನ್ನೇ ಇಲ್ಲವಾಗಿಸುವುದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಹೊಸದೇನಲ್ಲ. ಮೊದಲೆಲ್ಲ ತೆರೆಮರೆಯಲ್ಲಿ‌ ನಿಂತು ತಮ್ಮ ವಿರೋಧಿಗಳ‌ ಹತ್ಯೆಗಳಿಗೆ ಬೆಂಬಲ ನೀಡುತ್ತಾ ಬಂದವರು, ಈಗ ನೇರಾ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಎದುರಾಳಿಗಳನ್ನು ಸಂವಾದ, ಚರ್ಚೆಗಳ ಮೂಲಕ ಸೈದ್ಧಾಂತಿಕವಾಗಿ ಎದುರಿಸಲಾಗದವರು ದೈಹಿಕವಾಗಿ ಮುಗಿಸಲು ಹೊರಟಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕಾರವಾರ | ತಿನ್ನೈಘಾಟ್ ನಲ್ಲಿ ಅಪಘಾತ ಚಾಲಕ ಮೃತ

ಸಂಘಪರಿವಾರದ ದುರುಳರಿಂದ ಪ್ರಾಣ ಕಳೆದುಕೊಂಡವರು ಒಬ್ಬರಾ? ಇಬ್ಬರಾ? ಮಹಾತ್ಮ ಗಾಂಧಿಯವರಿಂದ ಆರಂಭಗೊಂಡ ಈ ಹತ್ಯಾ ಸರಣಿ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರ ಕೊಲೆಗಾರರಿಗೂ ತಮಗೂ ಸಂಬಂಧವಿಲ್ಲವೆಂದು ಹೇಳಿ ಸಂಘಪರಿವಾರದ ನಾಯಕರು ಸುಲಭದಲ್ಲಿ ತಲೆತೊಳೆದುಕೊಂಡರೂ, ಅವರ ಕೈಗಳಿಗಂಟಿದ ರಕ್ತದ ಕಲೆಗಳನ್ನು ತೊಳೆಯಲಾಗಲಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದು ಮೊದಲಲ್ಲ. ಇಂತಹ ಕೊಲೆಗಡುಕರಿಂದಲೇ ರಾಹುಲ್ ಅವರು ತಮ್ಮ ಅಜ್ಜಿ ಮತ್ತು‌ ಅಪ್ಪನನ್ನು ಕಳೆದುಕೊಂಡವರು. ರಾಹುಲ್ ಗಾಂಧಿ ಈಗ ಒಬ್ಬಂಟಿ ಅಲ್ಲ, ಅವರ ಬೆಂಬಲಕ್ಕೆ ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರಿದ್ದಾರೆ ಎನ್ನುವುದು ಬಿಜೆಪಿಯ ಕೊಲೆಗಡುಕ ಮನಸ್ಸುಗಳಿಗೆ ತಿಳಿದಿರಲಿ ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ನೋಡಿ: ಸಂಸ್ಕೃತಿ ಕಮಾಡಿಟಿ ಆಗ್ತಿದೆ. ಡಾ. ಸಿದ್ದನಗೌಡ ಪಾಟೀಲ Janashakthi Media

Donate Janashakthi Media

Leave a Reply

Your email address will not be published. Required fields are marked *