ಚಿತ್ರದುರ್ಗ: ಕುರಿ ಕಾಯುತ್ತಿದ್ದ ಬಾಲಕನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮರಳಿ ಶಾಲೆಗೆ ಸೇರಿಸಿದ್ದಾರೆ. ಶಾಲೆ
ಸೆ-10 ರಂದು ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಬಸಾಪೂರ ಗ್ರಾಮದ ಬಾಲಕ ಯೋಗೀಶ್, ಶಾಲೆ ಬಿಟ್ಟು ಕುರಿಕಾಯಲು ಹೋಗುತ್ತಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ಆದೇ ಊರಿನ ಮಹೇಂದ್ರ ಎಂಬವರಿಗೆ ಅನಿಸಿತು. ಅವರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹುಡುಗನ ಫೋಟೊ ಸಹಿತ ಹಾಕಿದರು. ಜತೆಗೆ ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೂ ತಂದಿದ್ದರು. ತಕ್ಷಣವೇ ಇದನ್ನು ಗಮನಿಸಿದ ಮುಖ್ಯಮಂತ್ರಿಗಳು ಬಾಲಕನನ್ನು ಮರಳಿ ಶಾಲೆಯ ಕಡೆ ಮುಖ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಪ್ರತಿ ತರಗತಿಯಲ್ಲೂ ಪರಿಸರ ಪಾಠ: ಸಚಿವ ಈಶ್ವರ ಖಂಡ್ರೆ ಸಲಹೆ
ಕಳೆದ 2 ವರ್ಷದಿಂದ ಯೋಗೀಶ್ ಶಾಲೆಗೆ ಹೋಗದೆ ಕುರಿಕಾಯಲು ತೆರಳುತ್ತಿದ್ದ ಎನ್ನಲಾಗಿದೆ. ಈ ಕುರಿತಾಗಿ ಸಿಎಂ ಆಫ್ ಕರ್ನಾಟಕ ಎಕ್ಸ್ ಖಾತೆಯನ್ನು ಟ್ಯಾಗ್ ಮಾಡಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸಾಪುರ (11) 2 ವರ್ಷದಿಂದ ಕುರಿ ಕಾಯುತ್ತ ಇದ್ದಾನೆ. ನಾಗರಿಕ ಜನಗಳ ಮದ್ಯ ಸ್ವಂತ ಮಗನನ್ನೇ ಅನಾಗರಿಕ ಮಾಡಲು ಹೊರಟಿರುವುದು ನೋವಿನ ಸಂಗತಿ ಎಂದು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ:ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೆ 2 ಮೊಟ್ಟೆ ನೀಡಲು ನಿರ್ಧಾರ
ಇದನ್ನು ಗಮನಿಸಿದ ಸಿಎಂ, ತಮ್ಮ ಕಾರ್ಯಾಲಯದ ಸಿಬ್ಬಂದಿ ಮೂಲಕ 24 ಗಂಟೆಗಳ ಒಳಗಾಗಿ ಬಾಲಕನನ್ನು ಶಾಲೆಗೆ ಸೇರಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್‌ಟ್‌ನಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಬಸಾಪುರದ ಯೋಗೇಶ್ ಎಂಬ ಬಾಲಕನನ್ನು ಆತನ ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ತೊಡಗಿಸಿದ್ದರು. ಈ ವಿಚಾರವು ಸ್ಥಳೀಯರೊಬ್ಬರಿಂದ ನಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿ, ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಲಾಗಿದೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಿದ್ದ ಯೋಗೇಶ್ ಈಗ ಇತರ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಾ, ನಲಿಯುತ್ತಾ ಉಜ್ವಲ ಭವಿಷ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ.
ಬಾಲ್ಯದಲ್ಲಿ ನಾನು ಕೂಡ ಯೋಗೇಶ್ ನಂತೆ ಶಾಲೆಯಿಂದ ವಂಚಿತನಾಗಿದ್ದೆ, ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿರುವ ಈ ಬಾಲಕನ ಭವಿಷ್ಯವೂ ಉಜ್ವಲವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ ಎಂದು ಬರೆದುಕೊಂಡಿದ್ದಾರೆ.