ಬೆಂಗಳೂರು: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿರುವ ಘಟನೆಯಿಂದ ಕೋವಿಡ್ ನಿಯಂತ್ರಣದಲ್ಲಿ ಸರಕಾರ ಸಂಪೂರ್ಣವಾಗಿ ಸೋತಿದೆ ಕೂಡಲೇ ಸಿಎಂ ಹಾಗೂ ಆರೋಗ್ಯ ಸಚಿವರು, ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ವೈಫಲ್ಯದ ಕಾರಣದಿಂದಾಗಿ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಘಟನೆಯ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ಇದನ್ನು ಓದಿ: ಆಕ್ಸಿಜನ್ ಕೊರತೆ ಚಾಮರಾಜನಗರದಲ್ಲಿ 24 ಮಂದಿ ಸಾವು
ಚಾಮರಾಜನಗರ ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರ ಜೊತೆಯಲ್ಲೇ ಆಕ್ಸಿಜನ್ ಸಿಗದ ಪರಿಣಾಮವಾಗಿ ಸರಣಿ ಸಾವುಗಳ ಸಂಖ್ಯೆಯೂ ಹೆಚ್ಚಾಗಿ ಭಾದಿಸುತ್ತಿರುವುದು ರಾಜ್ಯ ಸರಕಾರದ ಹೊಣೆಗೇಡಿತನವೇ ಕಾರಣವಾಗಿದೆ. ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಚಾಮರಾಜನಗರ: ಎಲ್ಲಾ ಸಾವುಗಳು ಆಮ್ಲಜನಕ ಕೊರತೆಯಿಂದ ಸಂಭವಿಸಿಲ್ಲ- ಸಚಿವ ಎಸ್.ಸುರೇಶ್ ಕುಮಾರ್
ಚಾಮರಾಜನಗರಕ್ಕೆ ಮೈಸೂರಿನಿಂದ ಆಮ್ಲಜನಕ ಪೂರೈಕೆಯಾಗುತ್ತದೆ. ಕಳೆದ ಶುಕ್ರವಾರದಿಂದಲೇ ಗಂಭೀರವಾದ ಸಮಸ್ಯೆ ಎದುರಾಗಿತ್ತು. ಆದರೂ ಸಹ ಸರ್ಕಾರ ಎಚ್ಚೆತ್ತುಕೊಳ್ಳದ ಪರಿಣಾಮವಾಗಿ ಈ ಘಟನೆ ನಡೆದಿದೆ. ಇದರಲ್ಲಿ ಸರಕಾರದ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಚಾಮರಾಜನಗರ ಜಿಲ್ಲೆಗೆ ಅಗತ್ಯ ಬೇಕಾದಷ್ಟು ಆಮ್ಲಜನಕ ಪೂರೈಕೆಯಾಗುತ್ತಿಲ್ಲ. ಘಟನೆಯ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಿ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದರು.